ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಇಂದು ಪ್ರೆಸ್ಟೀಜ್ ಬೀಟಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ (ಪ್ರೆಸ್ಟೀಜ್ ಗ್ರೂಪ್) ಜೊತೆ ಹಂತ-2ಎ ಹೊರ ವರ್ತುಲ ರಸ್ತೆ (ORR) ಕಾರಿಡಾರ್‌ನ ಬೆಳ್ಳಂದೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದದಂತೆ, ವಾಣಿಜ್ಯ ಕಾರ್ಯಾಚರಣೆ ಪ್ರಾರಂಭವಾದ ದಿನಾಂಕದಿಂದ 30 ವರ್ಷಗಳ ಕಾಲ ನಿಲ್ದಾಣವನ್ನು “ಪ್ರೆಸ್ಟೀಜ್ ಬೆಳ್ಳಂದೂರು ಮೆಟ್ರೋ ನಿಲ್ದಾಣ” ಎಂದು ಕರೆಯಲಾಗುತ್ತದೆ.ನಾಮಕರಣ ಹಕ್ಕುಗಳು ಮತ್ತು ಇತರೆ ಅನುಕೂಲಗಳಿಗೆ ಸಂಬಂಧಿಸಿದ ಒಪ್ಪಂದದ ಮೌಲ್ಯ ರೂ 80 ಕೋಟಿ ಆಗಿದ್ದು, ಮೆಟ್ರೋ ನಿಲ್ದಾಣದಿಂದ ಅವರ ಆವರಣಕ್ಕೆ ಸಂಪರ್ಕಿಸುವ ವಿಶೇಷ ಪಾದಚಾರಿ ಮೇಲ್ವೇತುವೆ (ಸೈವಾಕ್) ಆಯ್ಕೆ ಮಾಡಿದಲ್ಲಿ ಹೆಚ್ಚುವರಿ ರೂ 10 ಕೋಟಿ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ಸಹಭಾಗಿತ್ವದ ಮೌಲ್ಯ ₹90 ಕೋಟಿಯಾಗುತ್ತದೆ.
ನಾನ್ ಫೇರ್ ಬಾಕ್ಸ್ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮೆಟ್ರೋ ಜಾಲದ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.ಈ ವ್ಯವಸ್ಥೆಯ ಭಾಗವಾಗಿ, ಪ್ರಯಾಣಿಕರ ಸೌಕರ್ಯಗಳು ಮತ್ತು ಒಳಾಂಗಣ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಬಿ.ಎಂಆರ್.ಸಿ.ಎಲ್ ನೊಂದಿಗೆ ಸಮನ್ವಯದಿಂದ, ನಿಗದಿತ ಸುರಕ್ಷತೆ ಮತ್ತು ವಿನ್ಯಾಸ ಮಾನದಂಡಗಳನ್ನು ಅನುಸರಿಸುವ ಮೂಲಕ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಪ್ರೆಸ್ಟೀಜ್ ಗ್ರೂಪ್ ವಹಿಸಿಕೊಳ್ಳಲಿದೆ.ಈ ನಿಲ್ದಾಣವು ನಿಗಮದ ಸ್ವಾಮ್ಯದಲ್ಲಿ ಹಾಗೂ ನಿಯಂತ್ರಣದಲ್ಲಿರುವ ಸಾರ್ವಜನಿಕ ಆಸ್ತಿಯಾಗಿಯೇ ಉಳಿಯುತ್ತದೆ.
ಈ ಒಪ್ಪಂದದಲ್ಲಿ ನಿಲ್ದಾಣದ ನಾಮಕರಣ ಹಕ್ಕುಗಳು, ಗರಿಷ್ಠ 1,000 ಚದರ ಅಡಿ ಒಳಾಂಗಣ ಜಾಹೀರಾತು ಹಕ್ಕುಗಳು ಹಾಗೂ ನಿಲ್ದಾಣದ ಆವರಣದಲ್ಲಿ 3,000 ಚದರ ಅಡಿ ವಾಣಿಜ್ಯ ಸ್ಥಳದ ಹಂಚಿಕೆ ಸೇರಿವೆ.ನಿಯಂತ್ರಿತ ಅನುಮೋದನೆಗಳು ಮತ್ತು ಹೆಚ್ಚುವರಿ ರೂ 10 ಕೋಟಿ ಪಾವತಿಗೆ ಒಳಪಟ್ಟು, ನಿಲ್ದಾಣವನ್ನು ಸಂಪರ್ಕಿಸುವ ವಿಶೇಷ ಪಾದಚಾರಿ ಮೇಲ್ ಸೇತುವೆಯ ಸಾಧ್ಯತೆಯನ್ನು ಒಪ್ಪಂದವು ಒದಗಿಸಿರುತ್ತದೆ. ಭವಿಷ್ಯದಲ್ಲಿ ಯೋಜನಾ ಹಂತದಲ್ಲಿ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ಸಂಪರ್ಕಕ್ಕಾಗಿ ವಿನ್ಯಾಸ ನಿಬಂಧನೆಗಳನ್ನು ಸೇರಿಸಲಾಗಿದೆ.
ಸಾರ್ವಜನಿಕ ಮಾಲೀಕತ್ವದ ಸಂಸ್ಥೆ ಯೊಂದಿಗೆ ಖಾಸಗಿ ಭಾಗವಹಿಸುವಿಕೆಯನ್ನು ಬಳಸಿಕೊಳ್ಳುವಲ್ಲಿ ಯಾ ಕಾರ್ಯಾಚರಣೆಯ ಸಮಗ್ರತೆಗೆ ಧಕ್ಕೆಯಾಗದಂತೆ ಮೆಟ್ರೋ ಮೂಲಸೌಕರ್ಯವನ್ನು ಹೆಚ್ಚಿಸಲು ಈ ಪಾಲುದಾರಿಕೆಯು ಒಂದು ಮೈಲಿಗಲ್ಲು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಬಣ್ಣಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರೆಸ್ಟೀಜ್ ಗ್ರೂಪ್ ನ ಜಗ್ಗಿ ಮರ್ವಾಹಾ ಅವರು, ಬೆಂಗಳೂರು ನಗರದ ವೇಗವಾಗಿ ಬೆಳೆಯುತ್ತಿರುವ ಸಾರಿಗೆ-ಆಧಾರಿತ ಅಭಿವೃದ್ಧಿ ವಲಯಗಳಲ್ಲಿ ನಗರ ಚಲನವಲನ ಮೂಲಸೌಕರ್ಯಕ್ಕೆ ಬೆಂಬಲ ನೀಡುವ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಸಂಸ್ಥೆಯ ಬದ್ಧತೆಯನ್ನು ಈ ಸಹಕಾರ ಪ್ರತಿಬಿಂಬಿಸುತ್ತದೆ ಎಂದರು.
ಬೆಳ್ಳಂದೂರು ಮೆಟ್ರೋ ನಿಲ್ದಾಣವು ಹೊರ ವರ್ತುಲ ರಸ್ತೆಯ ಕಾರಿಡಾರ್‌ನ ಪ್ರಮುಖ ನಿಲ್ದಾಣವಾಗಿದ್ದು, ಬೆಂಗಳೂರಿನ ಐಟಿ ಮತ್ತು ವಾಣಿಜ್ಯ ಕೇಂದ್ರ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿದೆ.

