Fri. Mar 6th, 2026

ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ವಿ. ಸೋಮಣ್ಣ ಮನವಿ

Share this with Friends

ನವದೆಹಲಿ: ತುಮಕೂರು ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ಅವರು, ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾದ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿದರು.

ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾ ಬೆಟ್ಟ ಎಂಬ ಹೆಗ್ಗಳಿಕೆಯ ಮಧುಗಿರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮಾಡುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿತ್ತು. ಈ ಯೋಜನೆಯಿಂದ ಪ್ರವಾಸಿಗರಿಗೆ ಬೆಟ್ಟ ಹತ್ತುವುದು ಸುಲಭವಾಗಲಿದ್ದು, ಮಧುಗಿರಿಯು ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಬದಲಾಗಲಿದೆ. ರೋಪ್‌ವೇ ನಿರ್ಮಾಣಕ್ಕೆ ಭಾರತೀಯ ಪುರಾತತ್ವ ಇಲಾಖೆಯಿಂದ (ASI) ಅಗತ್ಯ ಅನುಮೋದನೆ ಕೊಡಿಸುವಂತೆ ಸೋಮಣ್ಣ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು. ಈ ಯೋಜನೆಯು ಜಾರಿಯಾದಲ್ಲಿ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಿ, ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು.

ಸಿದ್ದರಬೆಟ್ಟ, ದೇವರಾಯದುರ್ಗಕ್ಕೆ ಮೂಲಸೌಕರ್ಯ:

ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಧಾರ್ಮಿಕ ಮತ್ತು ಪ್ರಾಕೃತಿಕ ಪ್ರವಾಸಿ ತಾಣಗಳಾದ ಸಿದ್ದರಬೆಟ್ಟ ಹಾಗೂ ದೇವರಾಯದುರ್ಗ ಬೆಟ್ಟಗಳ ಅಭಿವೃದ್ಧಿಯ ಬಗ್ಗೆಯೂ ಚರ್ಚಿಸಲಾಯಿತು. ‘ಸ್ವದೇಶ್ ದರ್ಶನ್ 2.0’ ಯೋಜನೆಯಡಿ ಈ ತಾಣಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸೋಮಣ್ಣ ಕೋರಿದರು. ಈಗಾಗಲೇ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಾಮಗಾರಿಗಳಿಗೆ ವೇಗ ನೀಡಲು ಸೂಕ್ತ ಅನುದಾನದ ಅವಶ್ಯಕತೆಯಿದೆ ಎಂದು ವಿವರಿಸಿದರು.

ಕೇಂದ್ರ ಸಚಿವರ ಸಕಾರಾತ್ಮಕ ಸ್ಪಂದನೆ:

ವಿ. ಸೋಮಣ್ಣ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಮಧುಗಿರಿ ರೋಪ್‌ವೇ ಸೇರಿದಂತೆ ಎಲ್ಲಾ ಪ್ರಸ್ತಾವನೆಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ತುಮಕೂರಿನ ಈ ಐತಿಹಾಸಿಕ ಬೆಟ್ಟಗಳಿಗೆ ಖುದ್ದಾಗಿ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಸೋಮಣ್ಣ ಮಾಹಿತಿ ನೀಡಿದರು.

ಈ ಯೋಜನೆಗಳು ಸಾಕಾರಗೊಂಡಲ್ಲಿ ತುಮಕೂರು ಜಿಲ್ಲೆಯು ದಕ್ಷಿಣ ಭಾರತದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ ಎಂದು ಸಚಿವ ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share this with Friends

Related Post