Fri. Mar 6th, 2026

ಕೆಎಸ್‌ಐಸಿ ಪರಂಪರೆ ರಕ್ಷಿಸಿ, ವಿಮಾನ ನಿಲ್ದಾಣ ವಿಸ್ತರಣೆ ವೇಗಗೊಳಿಸಿ: ಸಿಎಂಗೆ ಸಂಸದ ಯದುವೀರ್ ಒಡೆಯರ್ ಮನವಿ

Share this with Friends

ಮೈಸೂರು: ಮೈಸೂರಿನ ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಹಾಗೂ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಮತ್ತು ವಿನಂತಿಗಳನ್ನೊಳಗೊಂಡ ಸವಿಸ್ತಾರವಾದ ಪತ್ರವನ್ನು ಸಲ್ಲಿಸಿದರು.

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಒಡೆಯೆರ್,ಟಿ. ನರಸೀಪುರದಲ್ಲಿರುವ ಐತಿಹಾಸಿಕ ಕೆಎಸ್‌ಐಸಿ (KSIC) ರೇಷ್ಮೆ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಸರ್ಕಾರದ ಪ್ರಸ್ತಾವನೆಗೆ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 1912ರಲ್ಲಿ ರಾಜವಂಶಸ್ಥರು ಸ್ಥಾಪಿಸಿದ ಈ ಕಾರ್ಖಾನೆಯು ಮೈಸೂರು ರೇಷ್ಮೆಯ ಮೂಲ ಕೇಂದ್ರವಾಗಿದೆ. “ಕಾರ್ಖಾನೆಯ ಆವರಣದ 6 ಎಕರೆ 8 ಗುಂಟೆ ಜಾಗವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸುವುದರಿಂದ ಕಾರ್ಖಾನೆಯ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಅಲ್ಲದೆ, ಇಲ್ಲಿರುವ ನೂರಾರು ಹಳೆಯ ಮರಗಳನ್ನು ಕಡಿಯುವುದು ಪರಿಸರ ವಿರೋಧಿ ನಡೆಯಾಗಲಿದೆ,” ಎಂದು ಅವರು ನೌಕರರ ಪರವಾಗಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕ್ರೀಡಾಂಗಣಕ್ಕಾಗಿ ಪರ್ಯಾಯ ಜಾಗವನ್ನು ಹುಡುಕಬೇಕೆಂದು ಅವರು ಒತ್ತಾಯಿಸಿದರು.

ವಿಮಾನ ನಿಲ್ದಾಣಕ್ಕೆ ವೇಗ:

ಮೈಸೂರಿನ ಆರ್ಥಿಕ ಚಿತ್ರಣವನ್ನು ಬದಲಿಸಬಲ್ಲ ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಯೋಜನೆಯತ್ತ ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಬೇಕೆಂದು ಸಂಸದರು ವಿನಂತಿಸಿದರು. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಉಂಟಾಗಿರುವ ವಿಳಂಬವನ್ನು ನಿವಾರಿಸಿ, ಅಗತ್ಯವಿರುವ ಜಮೀನನ್ನು ಶೀಘ್ರವಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಒಪ್ಪಿಸಿದರೆ ಅಂತರಾಷ್ಟ್ರೀಯ ಗುಣಮಟ್ಟದ ವಿಮಾನಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಇದು ಕೇವಲ ಪ್ರವಾಸೋದ್ಯಮವಲ್ಲದೆ, ಮೈಸೂರಿನ ಕೈಗಾರಿಕಾ ಕ್ಷೇತ್ರಕ್ಕೂ ಚೈತನ್ಯ ನೀಡಲಿದೆ ಎಂದು ಅವರು ವಿವರಿಸಿದರು.

ಸ್ಪಂದನೆ:

ಸಂಸದರ ಮನವಿಯನ್ನು ಆಲಿಸಿದ ಮುಖ್ಯಮಂತ್ರಿಗಳು, ಕೆಎಸ್‌ಐಸಿ ಕಾರ್ಖಾನೆಯ ಪರಂಪರೆ ಉಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಹಾಗೂ ವಿಮಾನ ನಿಲ್ದಾಣದ ಭೂ ಸ್ವಾಧೀನ ಪ್ರಕ್ರಿಯೆಗೆ ವೇಗ ನೀಡುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.


Share this with Friends

Related Post