ಯಾದಗಿರಿ: ಅಪ್ರಾಪ್ತ ಬಾಲಕಿಯ ಮೇಲೆ ಅನುಚಿತ ವರ್ತನೆ ತೋರಿದ ಆರೋಪ ಎದುರಿಸುತ್ತಿರುವ ಯಾದಗಿರಿಯ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಇದೀಗ ಅಜ್ಞಾತ ಸ್ಥಳದಿಂದ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಮುತ್ಯಾ, ವೀಡಿಯೋ ಮೂಲಕ ತಮ್ಮ ಮೊದಲ ಸ್ಪಷ್ಟನೆ ನೀಡಿದ್ದಾರೆ.
ವೀಡಿಯೋದಲ್ಲಿ ಏನಿದೆ?
ಪೋಕ್ಸೋ ಕೇಸ್ ದಾಖಲಾದ ನಂತರ ನಾಪತ್ತೆಯಾಗಿದ್ದ ಮುತ್ಯಾ, ಅಜ್ಞಾತ ಸ್ಥಳದಿಂದ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದ್ದಾರೆ:
ತಾವು ಎಲ್ಲೂ ಓಡಿ ಹೋಗಿಲ್ಲ ಮತ್ತು ತಲೆಮರೆಸಿಕೊಂಡಿಲ್ಲ.
ಪೊಲೀಸರು ವಿಚಾರಣೆಗೆ ಕರೆದಾಗ ಖುದ್ದಾಗಿ ಹಾಜರಾಗಿ ಸಹಕರಿಸುವುದಾಗಿ ತಿಳಿಸಿದ್ದಾರೆ.
ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ತನಿಖೆಯ ವೇಳೆ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ.
ತನಿಖೆ ಚುರುಕು:
ಆರೋಪಿ ಮಲ್ಲಿಕಾರ್ಜುನ ಮುತ್ಯಾನ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಸದ್ಯ ಮುತ್ಯಾ ಬಿಡುಗಡೆ ಮಾಡಿರುವ ವೀಡಿಯೋದ ಮೂಲವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ಘಟನೆಯ ವಿವರ:
ಶಹಾಪುರ ತಾಲೂಕಿನ ರೋಜಾ ಮಹೆಲ್ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ಅವರು ಬಾಲಕಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿ, ತನಿಖೆಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಯಾದಗಿರಿಯ ಗೋಗಿ ಪೊಲೀಸ್ ಠಾಣೆಯಲ್ಲಿ ಮುತ್ಯಾ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು.

