Thu. Mar 5th, 2026

ಬೆಂಗಳೂರಿನ ಆರೋಗ್ಯ ವ್ಯವಸ್ಥೆಗೆ ಹೊಸ ರೂಪ: ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಆರೋಗ್ಯ ಕೇಂದ್ರಗಳ ಪುನರ್ ರಚನೆ

Share this with Friends

ಬೆಂಗಳೂರು: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ರಾಜಧಾನಿಯ ಜನಸಂಖ್ಯೆಗೆ ತಕ್ಕಂತೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ವ್ಯಾಪ್ತಿಯ ಆರೋಗ್ಯ ಸೌಲಭ್ಯಗಳ ಪುನರ್ ರಚನೆಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ವಿಕಾಸಸೌಧದಲ್ಲಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ನಗರದ ಆರೋಗ್ಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಕಾರ್ಯವೈಖರಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಜವಾಬ್ದಾರಿ ಹಂಚಿಕೆ:

ಸಭೆಯ ನಿರ್ಧಾರದಂತೆ, ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸುಪರ್ದಿಯಲ್ಲಿ ಒಟ್ಟು 51 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು (UPHC) ಹಾಗೂ 08 ಡಿಸ್ಪೆನ್ಸರಿಗಳು ಕಾರ್ಯನಿರ್ವಹಿಸಲಿವೆ. ಇವುಗಳ ದೈನಂದಿನ ನಿರ್ವಹಣೆ ಮತ್ತು ನಾಗರಿಕರಿಗೆ ತಲುಪುವ ಸೇವೆಯ ಮೇಲೆ ಪ್ರಾಧಿಕಾರವು ನಿಗಾ ವಹಿಸಲಿದೆ.

ಇನ್ನುಳಿದಂತೆ, ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ 02 ಸಮುದಾಯ ಆರೋಗ್ಯ ಕೇಂದ್ರಗಳನ್ನು (CHC) ನೇರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ನಿರ್ವಹಣೆ ಮಾಡಲಿದೆ. ಈ ಮೂಲಕ ಆಡಳಿತಾತ್ಮಕ ಗೊಂದಲಗಳನ್ನು ನಿವಾರಿಸಿ, ಜನರಿಗೆ ಸುಲಭವಾಗಿ ಚಿಕಿತ್ಸೆ ದೊರೆಯುವಂತೆ ಮಾಡುವ ಗುರಿ ಹೊಂದಲಾಗಿದೆ.

ನಗರದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹತ್ತಿರದ ಆರೋಗ್ಯ ಕೇಂದ್ರಗಳಲ್ಲೇ ಸುಧಾರಿತ ಚಿಕಿತ್ಸೆ ಲಭ್ಯವಾಗುವಂತೆ ಮಾಡುವುದು ಈ ಪುನರ್ ರಚನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಭೆಯಲ್ಲಿ ಆಶಯ ವ್ಯಕ್ತಪಡಿಸಲಾಯಿತು.


Share this with Friends

Related Post