ಬೆಂಗಳೂರು: ರಾಜ್ಯದ ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 55ನೇ ಸುವರ್ಣ ಸಂಭ್ರಮ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ಸ್ನೇಹಿ ಆಡಳಿತ:
“ಕಳೆದ ಎರಡು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ. ಸುಮಾರು 14,499 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಶಿಕ್ಷಕರು ದಶಕಗಳಿಂದ ಎದುರಿಸುತ್ತಿದ್ದ ವರ್ಗಾವಣೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಮೂಲಕ ಶಿಕ್ಷಕ ಸ್ನೇಹಿ ಆಡಳಿತವನ್ನು ಜಾರಿಗೆ ತರಲಾಗಿದೆ” ಎಂದು ಸಚಿವರು ವಿವರಿಸಿದರು.
ಸಮುದಾಯದ ಸಹಭಾಗಿತ್ವ:
ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ 46,000 ಸರ್ಕಾರಿ ಶಾಲೆಗಳಲ್ಲಿ ಏಕಕಾಲದಲ್ಲಿ ಪೋಷಕರ ಸಭೆ ನಡೆಸಿರುವುದು ಶಾಲಾ ಅಭಿವೃದ್ಧಿಯಲ್ಲಿ ಮೈಲಿಗಲ್ಲಾಗಿದೆ. ಮಕ್ಕಳ ಪೌಷ್ಟಿಕಾಂಶಕ್ಕಾಗಿ ಮೊಟ್ಟೆ, ಹಾಲು ಹಾಗೂ ಶೂ-ಸಾಕ್ಸ್ ವಿತರಣಾ ಯೋಜನೆಗಳನ್ನು ಚುರುಕುಗೊಳಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಶೇ.20 ರಷ್ಟು ಹೆಚ್ಚಿಸುವ ಗುರಿಯನ್ನು ಶಿಕ್ಷಕರು ತಲುಪಬೇಕು ಎಂದು ಅವರು ಇದೇ ವೇಳೆ ಕರೆ ನೀಡಿದರು.
ಗಣ್ಯರಿಗೆ ಬಿರುದು ಪ್ರದಾನ:
ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸಚಿವ ಮಧು ಬಂಗಾರಪ್ಪ ಅವರಿಗೆ ‘ಗುರುಕುಲ’ ಬಿರುದು ನೀಡಿ ಗೌರವಿಸಲಾಯಿತು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ಶಿಕ್ಷಣ ರಾಮಯ್ಯ’, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ‘ಸಂಘ ಮಿತ್ರ’ ಹಾಗೂ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ‘ಶಿಕ್ಷಕ ಸೈನಿಕ’ ಬಿರುದುಗಳನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ, ಎಐಪಿಟಿಎಫ್ ರಾಷ್ಟ್ರಾಧ್ಯಕ್ಷ ಬಸವರಾಜ ಗುರಿಕಾರ ಹಾಗೂ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಸೇರಿದಂತೆ ಸಾವಿರಾರು ಶಿಕ್ಷಕರು ಉಪಸ್ಥಿತರಿದ್ದರು.

