Fri. Mar 6th, 2026

ಮಾರ್ಚ್ 3ರಂದು ಚಂದ್ರಗ್ರಹಣ: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ದರ್ಶನ ಸಮಯದಲ್ಲಿ ಬದಲಾವಣೆ

Share this with Friends

ಹೊರನಾಡು: ಶ್ರೀ ವಿಶ್ವಾವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಪೌರ್ಣಮಿಯ ದಿನವಾದ ಮಾರ್ಚ್ 3, 2026ರ ಮಂಗಳವಾರದಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಸುಕ್ಷೇತ್ರ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದರ್ಶನ ಹಾಗೂ ಪ್ರಸಾದ ಭೋಜನದ ಸಮಯದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಗ್ರಹಣದ ಸಮಯ:

ಅಂದು ಮಧ್ಯಾಹ್ನ 03:18ಕ್ಕೆ ಗ್ರಹಣ ಸ್ಪರ್ಶವಾಗಲಿದ್ದು, ಸಂಜೆ 05:04ಕ್ಕೆ ಮಧ್ಯಕಾಲ ಹಾಗೂ ಸಂಜೆ 06:48ಕ್ಕೆ ಮೋಕ್ಷಕಾಲವಿರಲಿದೆ. ಗ್ರಹಣದ ಪುಣ್ಯಕಾಲದ ಅವಧಿಯಲ್ಲಿ ಶ್ರೀಮಾತೆಗೆ ನಿರಂತರವಾಗಿ ವಿಶೇಷ ಅಭಿಷೇಕಗಳು ನೆರವೇರಲಿವೆ.

ಭಕ್ತಾದಿಗಳ ಗಮನಕ್ಕೆ ಪ್ರಮುಖ ಬದಲಾವಣೆಗಳು:

ದರ್ಶನ ಸ್ಥಗಿತ: ಮಧ್ಯಾಹ್ನ 03:00 ಗಂಟೆಯಿಂದ ಸಂಜೆ 07:00 ಗಂಟೆಯವರೆಗೆ ಭಕ್ತಾದಿಗಳಿಗೆ ಶ್ರೀಮಾತೆಯ ದರ್ಶನಕ್ಕೆ ಅವಕಾಶವಿರುವುದಿಲ್ಲ.

ಪ್ರಸಾದ ಭೋಜನ: ಗ್ರಹಣದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಪ್ರಸಾದ ಭೋಜನದ ವ್ಯವಸ್ಥೆಯು 12:00 ಗಂಟೆಗೆ ಮುಕ್ತಾಯಗೊಳ್ಳಲಿದೆ. ನಂತರ ರಾತ್ರಿ 08:00 ಗಂಟೆಯಿಂದ ಎಂದಿನಂತೆ ಪ್ರಸಾದ ವಿನಿಯೋಗ ಆರಂಭವಾಗಲಿದೆ.

ಮಹಾಮಂಗಳಾರತಿ: ಅಂದು ಬೆಳಿಗ್ಗೆ 09:00, ಮಧ್ಯಾಹ್ನ 12:00 ಹಾಗೂ ಗ್ರಹಣ ಮುಕ್ತಾಯದ ನಂತರ ರಾತ್ರಿ 09:00 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ.

ದೂರದೂರುಗಳಿಂದ ಬರುವ ಭಕ್ತಾದಿಗಳು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣ ಹಾಗೂ ದರ್ಶನದ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ಕೋರಿದ್ದಾರೆ.


Share this with Friends

Related Post