Sat. Mar 7th, 2026

ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ: ಎಲ್‌ಪಿಜಿ ಬೆಲೆ ಏರಿಕೆ ಖಂಡಿಸಿ ಪ್ರಧಾನಿ ರಾಜೀನಾಮೆಗೆ ಆಗ್ರಹ

Share this with Friends

ಬೆಂಗಳೂರು: ದೇಶದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಹಣದುಬ್ಬರದಿಂದ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮಾಡಿದ ದ್ರೋಹ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಸಿಲಿಂಡರ್ ಬೆಲೆಯನ್ನು ₹60ರಷ್ಟು ಹೆಚ್ಚಿಸಿರುವುದು ಜನಸಾಮಾನ್ಯರ ಜೀವನ ನಿರ್ವಹಣೆಯನ್ನು ದುಬಾರಿಯಾಗಿಸಿದೆ. ಇದು ಅನಿವಾರ್ಯ ಕ್ರಮವಲ್ಲ, ಬದಲಾಗಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯದ ಫಲವಾಗಿದೆ ಎಂದು ಟೀಕಿಸಿದ್ದಾರೆ.

ವಿದೇಶಾಂಗ ನೀತಿಯ ಟೀಕೆ:

ಭಾರತದ ವ್ಯೂಹಾತ್ಮಕ ಸ್ವಾತಂತ್ರ್ಯವನ್ನು ಅಮೆರಿಕದ ಪಾದದಡಿ ಇಡಲಾಗಿದೆ ಎಂದು ಆರೋಪಿಸಿರುವ ಸಿಎಂ, ರಷ್ಯಾ ಮತ್ತು ಇರಾನ್‌ನಂತಹ ದೀರ್ಘಕಾಲೀನ ಇಂಧನ ಪಾಲುದಾರ ದೇಶಗಳೊಂದಿಗಿನ ಸಂಬಂಧವನ್ನು ಪ್ರಧಾನಿ ಮೋದಿ ಹಾಳುಗೆಡವಿದ್ದಾರೆ. ಪಂಡಿತ್ ನೆಹರೂ ಅವರ ಆರ್ಥಿಕ ಮತ್ತು ವಿದೇಶಾಂಗ ನೀತಿಯ ಎಚ್ಚರಿಕೆಯನ್ನು ಪ್ರಧಾನಿಗಳು ಮರೆತಿದ್ದಾರೆ. ರಾಜತಾಂತ್ರಿಕತೆಯು ಕೇವಲ ಪ್ರದರ್ಶನದ ವಸ್ತುವಾದಾಗ ಅದರ ಹೊರೆ ಬಡವರ ಮೇಲೆ ಬೀಳುತ್ತದೆ ಎಂದು ಅವರು ದೂರಿದ್ದಾರೆ.

ರಾಜೀನಾಮೆಗೆ ಒತ್ತಾಯ:

ಮಾಜಿ ಸೇನಾಧಿಕಾರಿ ಜನರಲ್ ಎಂ.ಎಂ. ನರವಣೆ ಅವರ ಪುಸ್ತಕದ ಉಲ್ಲೇಖ ನೀಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ನಿರ್ಧಾರಗಳಲ್ಲಿ ಸಾಂಸ್ಥಿಕ ಸಮಾಲೋಚನೆಯ ಕೊರತೆಯಿದೆ ಎಂದಿದ್ದಾರೆ. ಎಫ್‌ಸ್ಟೀನ್ ಫೈಲ್ಸ್ ಕುರಿತಾದ ಭಯ ಮತ್ತು ರಾಜತಾಂತ್ರಿಕ ಅಜ್ಞಾನವು ದೇಶದ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ. ಈ ಎಲ್ಲಾ ವೈಫಲ್ಯಗಳ ಹೊಣೆ ಹೊತ್ತು ಪ್ರಧಾನಿಗಳು ದೇಶದ ಕ್ಷಮೆಯಾಚಿಸಬೇಕು ಹಾಗೂ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಆಗ್ರಹಿಸಿದ್ದಾರೆ.


Share this with Friends

Related Post