Sat. Mar 7th, 2026

ಸರ್ಕಾರಿ ಶಾಲೆಗಳ ಬಲವರ್ಧನೆಗೆ ದಾನಿಗಳು ಮುಂದಾಗಿ: ಸಚಿವ ಕೆ.ಜೆ. ಜಾರ್ಜ್ ಕರೆ

Share this with Friends

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳು ದಕ್ಷ ಶಿಕ್ಷಕರನ್ನು ಹೊಂದಿದ್ದು, ಉತ್ತಮ ಮೂಲಸೌಕರ್ಯ ಒದಗಿಸಿದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ದಾನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದರು.

ತಾಲೂಕಿನ ತೇಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ (1925–2025) ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶಾಲಾ ನವೀಕರಣ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,1925 ರಲ್ಲಿ ಆರಂಭವಾಗಿ 2025 ರ ಹೊಸ್ತಿಲಲ್ಲಿರುವ ಈ ಶಾಲೆಯ ನೂರು ವರ್ಷಗಳ ಸಾಧನೆಯನ್ನು ಕೊಂಡಾಡಿದರು.

ಶಾಲೆಯ ನೂರು ವರ್ಷಗಳ ಸುದೀರ್ಘ ಪಯಣವನ್ನು ಶ್ಲಾಘಿಸಿದ ಸಚಿವರು, “ನಮ್ಮ ಸರ್ವಜ್ಞನಗರ ಕ್ಷೇತ್ರದಲ್ಲಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳನ್ನು ನವೀಕರಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಇದರ ಪರಿಣಾಮವಾಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಹೆಚ್ಚಳವಾಗಿದೆ. ಅದೇ ಮಾದರಿಯಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕು” ಎಂದು ಆಶಯ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಯು ಕೇವಲ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಅದು ಸಮಾಜದ ಹೊಣೆಗಾರಿಕೆಯೂ ಆಗಿದೆ. ಹಾಗಾಗಿ, ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ದಾನಿಗಳು ಶಾಲೆಗಳ ಬಲವರ್ಧನೆಗೆ ಉದಾರವಾಗಿ ಕೈಜೋಡಿಸಬೇಕು. ಶಿಕ್ಷಣ ಕ್ಷೇತ್ರಕ್ಕೆ ನೀಡುವ ಕೊಡುಗೆಯು ಮುಂದಿನ ತಲೆಮಾರಿನ ಉಜ್ವಲ ಭವಿಷ್ಯಕ್ಕೆ ಅಡಿಪಾಯವಾಗಲಿದೆ ಎಂದು ಅವರು ಕರೆ ನೀಡಿದರು.

ಇದೇ ವೇಳೆ ಶಾಲೆಯ ಶತಮಾನೋತ್ಸವದ ಸ್ಮರಣಾರ್ಥ ನವೀಕರಿಸಲಾದ ವಿವಿಧ ಕಟ್ಟಡ ಹಾಗೂ ಸೌಲಭ್ಯಗಳನ್ನು ಸಚಿವರು ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಕೆಪಿಸಿಸಿ ಜಿಲ್ಲಾಧ್ಯಕ್ಷ ಹರೀಶ್, ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ಜಿಲ್ಲಾ ಪಂಚಾಯತ್ ಸಿಇಒ ಕೀರ್ತನಾ ಹೆಚ್.ಎಸ್. ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

 


Share this with Friends

Related Post