Tue. Mar 10th, 2026

ಶಿಕ್ಷಕರಿಗೆ ಬೀದಿ ನಾಯಿ ಕಾಯುವ ಕೆಲಸ: ಸರ್ಕಾರದ ವಿರುದ್ಧ ಬಸವರಾಜ ಹೊರಟ್ಟಿ ಆಕ್ರೋಶ

Share this with Friends

ಬೆಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಈಗಾಗಲೇ ಬೋಧನೇತರ ಕೆಲಸಗಳ ಹೊರೆಯಿಂದ ಬೆಸತ್ತಿರುವ ಶಿಕ್ಷಕರಿಗೆ ಇದೀಗ ಬೀದಿ ನಾಯಿಗಳ ನಿಯಂತ್ರಣದ ಜವಾಬ್ದಾರಿ ನೀಡಿರುವ ಸರ್ಕಾರದ ಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕೂಡಲೇ ಈ ಅವೈಜ್ಞಾನಿಕ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಶಿಕ್ಷಕರು ನಾಯಿ ಕಾಯಬೇಕೆ?:

ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿರುವುದು ಶಿಕ್ಷಕ ವೃತ್ತಿಯ ಘನತೆಗೆ ತಂದ ಚ್ಯುತಿಯಾಗಿದೆ. “ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಬೀದಿ ನಾಯಿಗಳನ್ನು ಕಾಯಬೇಕೆ? ಸರ್ಕಾರ ಶಿಕ್ಷಕರನ್ನು ನಾಯಿಗಳಿಗಿಂತ ಕಡೆಯಾಗಿ ನೋಡುತ್ತಿರುವುದು ವಿಷಾದನೀಯ” ಎಂದು ಹೊರಟ್ಟಿ ಅವರು ಪತ್ರದಲ್ಲಿ ಕಿಡಿಕಾರಿದ್ದಾರೆ.

ಶಿಕ್ಷಣದ ಗುಣಮಟ್ಟಕ್ಕೆ ಕೊಡಲಿ ಪೆಟ್ಟು:

ಈಗಾಗಲೇ ಶಿಕ್ಷಕರು ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಶಾಲಾ ಮಕ್ಕಳಿಗೆ ಹಾಲು-ಮೊಟ್ಟೆ ವಿತರಣೆಯಂತಹ ಹತ್ತಾರು ಬೋಧನೇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಹೊಸ ಜವಾಬ್ದಾರಿಗಳನ್ನು ಹೇರುವುದರಿಂದ ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ರಾಜ್ಯದಲ್ಲಿ ಈಗಾಗಲೇ ಶಿಕ್ಷಕರ ಕೊರತೆ ಎದುರಾಗಿದ್ದು, ಇಂತಹ ನಿರ್ಧಾರಗಳು ಶೈಕ್ಷಣಿಕ ಫಲಿತಾಂಶ ಕುಸಿಯಲು ಕಾರಣವಾಗುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

ಸರ್ಕಾರಕ್ಕೆ ಆಗ್ರಹ:

ಶಿಕ್ಷಕ ಸಮುದಾಯದಲ್ಲಿ ಈ ಆದೇಶವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಕರನ್ನು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತಗೊಳಿಸಿ, ಅವರ ಮೇಲಿರುವ ಹೆಚ್ಚುವರಿ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು. ಮುಖ್ಯವಾಗಿ ಬೀದಿ ನಾಯಿಗಳ ನಿಯಂತ್ರಣದ ಹೊಣೆಯಿಂದ ಶಿಕ್ಷಕರನ್ನು ಮುಕ್ತಗೊಳಿಸುವಂತೆ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

 


Share this with Friends

Related Post