Tue. Mar 10th, 2026

ಕೆ.ಜಿ. ರಸ್ತೆಯ ಅತಿಕ್ರಮಣ ತೆರವಿಗೆ ಗೃಹ ಸಚಿವರ ಖಡಕ್ ಆದೇಶ: ಪಾದಚಾರಿಗಳ ದಾರಿಗೆ ಅಡ್ಡಿಯಾದರೆ ಕ್ರಮ

Share this with Friends

ಬೆಂಗಳೂರು: ನಗರದ ಜನನಿಬಿಡ ಕೆಂಪೇಗೌಡ ರಸ್ತೆಯಲ್ಲಿ (ಮೈಸೂರು ಬ್ಯಾಂಕ್ ವೃತ್ತದ ಬಳಿ) ಪಾದಚಾರಿ ಮಾರ್ಗ ಅತಿಕ್ರಮಣ ಮತ್ತು ಅನಧಿಕೃತ ಪಾರ್ಕಿಂಗ್ ಸಮಸ್ಯೆಗೆ ಕೊನೆ ಹಾಡಲು ಸರ್ಕಾರ ಮುಂದಾಗಿದೆ. ಸಂಚಾರ ದಟ್ಟಣೆ ನಿವಾರಣೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಇಂದು ಸದಸ್ಯ ರಮೇಶ್ ಬಾಬು ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಮೈಸೂರು ಬ್ಯಾಂಕ್ ಸುತ್ತಮುತ್ತಲಿನ ಅಸ್ತವ್ಯಸ್ತ ಸಂಚಾರ ವ್ಯವಸ್ಥೆಯ ಸುಧಾರಣೆಗೆ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು.

ಬಿಬಿಎಂಪಿಗೆ ಸೂಚನೆ:

ಪಾದಚಾರಿ ಮಾರ್ಗಗಳಲ್ಲಿ ಕಾನೂನುಬಾಹಿರವಾಗಿ ಶೆಡ್‌ಗಳನ್ನು ನಿರ್ಮಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕೂಡಲೇ ಇವುಗಳನ್ನು ತೆರವುಗೊಳಿಸಿ, ಸಾಮಗ್ರಿಗಳನ್ನು ವಶಕ್ಕೆ ಪಡೆಯಲು ಬಿಬಿಎಂಪಿ ಗಾಂಧಿನಗರ ವಾರ್ಡ್‌ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ದಂಡದ ಬಿಸಿ:

ಅನಧಿಕೃತ ವಾಹನ ನಿಲುಗಡೆ ವಿರುದ್ಧ ಪೊಲೀಸರು ಹೂಡಿರುವ ಸಮರದ ಅಂಕಿಅಂಶಗಳನ್ನು ನೀಡಿದ ಸಚಿವರು, ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ 159 ಪ್ರಕರಣಗಳನ್ನು ದಾಖಲಿಸಿ, ಒಟ್ಟು 96,400 ರೂ. ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ, ಬಿಎನ್‌ಎಸ್ ಕಾಯ್ದೆಯಡಿ ಎಂಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ನಿರಂತರ ನಿಗಾಕ್ಕೆ ಎಎಸ್‌ಐ ನೇಮಕ:

ವಾಹನ ಸವಾರರು ಮತ್ತು ಪಾದಚಾರಿಗಳ ಹಿತದೃಷ್ಟಿಯಿಂದ ಸ್ಥಳದಲ್ಲಿ ಪ್ರತಿದಿನ ಒಬ್ಬ ಎಎಸ್‌ಐ ನೇತೃತ್ವದ ಪೊಲೀಸ್ ತಂಡ ನಿಯೋಜಿಸಲಾಗುತ್ತಿದೆ. ಐಎಂವಿ ಮತ್ತು ಬಿಎನ್‌ಎಸ್ ಕಾಯ್ದೆಗಳ ಅಡಿಯಲ್ಲಿ ಅಕ್ರಮ ಪಾರ್ಕಿಂಗ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ. ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸುಗಮ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

 


Share this with Friends

Related Post