ಬೆಂಗಳೂರು: ಮನೆ ಬಳಕೆಗೆಂದೇ ಪಡೆದ ವಿದ್ಯುತ್ ಸಂಪರ್ಕವನ್ನು ವಾಣಿಜ್ಯ ಹಾಗೂ ಇತರ ಉದ್ದೇಶಗಳಿಗೆ ಬಳಸದಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಗ್ರಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಗೃಹ ಬಳಕೆಗಾಗಿ ಇರುವ ‘ಎಲ್‌ಟಿ-1’ ವಿದ್ಯುತ್ ಸಂಪರ್ಕವನ್ನು ಬಳಸಿಕೊಂಡು ಹಲವು ಗ್ರಾಹಕರು ಪೇಯಿಂಗ್ ಗೆಸ್ಟ್ (PG), ಮೆಸ್, ಅತಿಥಿ ಗೃಹ, ಅಂಗಡಿ-ಮುಂಗಟ್ಟು ಹಾಗೂ ಸಣ್ಣಪುಟ್ಟ ಕಾರ್ಖಾನೆಗಳನ್ನು ನಡೆಸುತ್ತಿರುವುದು ಬೆಸ್ಕಾಂ ಗಮನಕ್ಕೆ ಬಂದಿದೆ. ಇಂತಹ ಅನಧಿಕೃತ ಬಳಕೆಯು ನಿಯಮಬಾಹಿರವಾಗಿದ್ದು, ಪತ್ತೆಯಾದಲ್ಲಿ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ವರ್ಗಾವಣೆ ಮಾಡಿಕೊಳ್ಳಲು ಅವಕಾಶ:
ಒಂದು ವೇಳೆ ಗೃಹ ಬಳಕೆಯ ಸಂಪರ್ಕವನ್ನು ಈಗಾಗಲೇ ವಾಣಿಜ್ಯ ಚಟುವಟಿಕೆಗೆ ಬಳಸುತ್ತಿದ್ದರೆ, ಅಂತಹ ಗ್ರಾಹಕರು ಕೂಡಲೇ ಸಂಬಂಧಪಟ್ಟ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿ ವಿದ್ಯುತ್ ದರ ವರ್ಗ (Tariff Category) ಬದಲಾವಣೆಗೆ ಅರ್ಜಿ ಸಲ್ಲಿಸಿ, ನಿಯಮಾನುಸಾರ ಹೊಸ ಸಂಪರ್ಕ ಪಡೆಯಲು ಅವಕಾಶ ನೀಡಲಾಗಿದೆ.
ತಾತ್ಕಾಲಿಕ ಸಂಪರ್ಕ ಅಗತ್ಯ:
ಉತ್ಸವಗಳು, ಧಾರ್ಮಿಕ ಆಚರಣೆಗಳು ಅಥವಾ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ವಿದ್ಯುತ್ ಅಗತ್ಯವಿದ್ದಲ್ಲಿ ಮನೆಯ ಸಂಪರ್ಕ ಬಳಸುವಂತಿಲ್ಲ. ಅಂತಹ ಸಂದರ್ಭಗಳಲ್ಲಿ ಬೆಸ್ಕಾಂ ಕಚೇರಿಯಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಪಡೆಯುವುದು ಕಡ್ಡಾಯ ಎಂದು ಪ್ರಕಟಣೆ ತಿಳಿಸಿದೆ.
ದಂಡದ ಎಚ್ಚರಿಕೆ:
ನಿಯಮ ಉಲ್ಲಂಘಿಸುವವರ ವಿರುದ್ಧ ವಿದ್ಯುತ್ ಅಧಿನಿಯಮ 2003ರ ಕಲಂ 126, 135 ಹಾಗೂ ವಿದ್ಯುತ್ ಸರಬರಾಜು ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

