Fri. Mar 13th, 2026

ಬೆಳ್ಳಿತೆರೆಯ ಮೇಲೆ ಮತ್ತೆ ಅಪ್ಪು ಅಬ್ಬರ: ‘ಆಕಾಶ್’ ನೋಡಿ ಭಾವುಕರಾದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

Share this with Friends

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಎವರ್‌ಗ್ರೀನ್ ಹಿಟ್ ಸಿನಿಮಾ ‘ಆಕಾಶ್’ ಮರುಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ವಿಶೇಷ ಸಂದರ್ಭದಲ್ಲಿ ನಟಿ ರಮ್ಯಾ ಅವರು ಬೆಂಗಳೂರಿನ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದರು.

ಶುಕ್ರವಾರ ನಗರದ ಚಿತ್ರಮಂದಿರಕ್ಕೆ ಆಗಮಿಸಿದ ರಮ್ಯಾ, ಸಾಮಾನ್ಯ ಪ್ರೇಕ್ಷಕಿಯಂತೆ ಗ್ಯಾಲರಿಯಲ್ಲಿ ಕುಳಿತು ಸಿನಿಮಾ ಸವಿದರು. ಚಿತ್ರದ ಜನಪ್ರಿಯ ಹಾಡುಗಳಿಗೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ರಮ್ಯಾ ಕೂಡ ಅವರೊಂದಿಗೆ ಧ್ವನಿಗೂಡಿಸಿ ಅಪ್ಪು ನೆನಪಿನಲ್ಲಿ ಮುಳುಗಿದರು.

ಅಪ್ಪು ನೆನೆದು ಭಾವುಕ:

ಸಿನಿಮಾ ವೀಕ್ಷಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, “ತೆರೆಯ ಮೇಲೆ ಅಪ್ಪುನ ನೋಡುತ್ತಿದ್ದರೆ ತುಂಬಾ ಖುಷಿಯಾಗುತ್ತದೆ, ಆದರೆ ಅವರು ನಮ್ಮೊಂದಿಗಿಲ್ಲ ಎನ್ನುವ ಸತ್ಯ ಮನಸ್ಸಿಗೆ ಭಾರ ನೀಡುತ್ತದೆ. ಈ ಸಿನಿಮಾದ ಚಿತ್ರೀಕರಣದ ದಿನಗಳು ಈಗಷ್ಟೇ ನಡೆದಂತೆ ಭಾಸವಾಗುತ್ತಿದೆ” ಎಂದು ಭಾವುಕರಾಗಿ ನುಡಿದರು.

ಗಣ್ಯರ ಸಾಥ್:

ಈ ವೇಳೆ ರಾಘವೇಂದ್ರ ರಾಜ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಕೂಡ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಸಂಭ್ರಮದಲ್ಲಿ ಭಾಗಿಯಾದರು. 2005ರಲ್ಲಿ ತೆರೆಕಂಡಿದ್ದ ‘ಆಕಾಶ್’ ಚಿತ್ರ ಈಗಲೂ ಅದೇ ಕ್ರೇಜ್ ಉಳಿಸಿಕೊಂಡಿರುವುದು ವಿಶೇಷ. ಚಿತ್ರಮಂದಿರದ ಹೊರಗೆ ಅಪ್ಪು ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು.

ಸರಳ ಗುಲಾಬಿ ಬಣ್ಣದ ಉಡುಪಿನಲ್ಲಿ ಮಿಂಚಿದ ರಮ್ಯಾ, ಚಿತ್ರಮಂದಿರಕ್ಕೆ ಬಂದಿದ್ದ ಅಭಿಮಾನಿಗಳತ್ತ ಕೈಬೀಸಿ ವಂದಿಸಿದರು. ಮರುಬಿಡುಗಡೆಯಲ್ಲೂ ‘ಆಕಾಶ್’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಪ್ಪು ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

 


Share this with Friends

Related Post