Sat. Mar 14th, 2026

ಯಶವಂತಪುರದಲ್ಲಿ ಪಾರಂಪರಿಕ ಕಲೆಗಳ ಬೃಹತ್ ಮಾರುಕಟ್ಟೆ ಸಂಕೀರ್ಣ ನಿರ್ಮಾಣ: ಸಚಿವ ಶಿವಾನಂದ ಪಾಟೀಲ ಘೋಷಣೆ

Share this with Friends

ಬೆಂಗಳೂರು: ರಾಜ್ಯದ ಪಾರಂಪರಿಕ ಕಲೆಗಳನ್ನು ಪ್ರೋತ್ಸಾಹಿಸಲು ಹಾಗೂ ಸ್ಥಳೀಯ ಕುಶಲಕರ್ಮಿಗಳ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ಯಶವಂತಪುರದಲ್ಲಿ ಹ್ಯಾಂಡ್‌ಲೂಮ್ ಮತ್ತು ಕಲಾ ಸಂಕೀರ್ಣವನ್ನು ನಿರ್ಮಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಶನಿವಾರ ಪ್ರಕಟಿಸಿದರು.

ನಗರದ ರಾಜಾಜಿನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 14 ದಿನಗಳ ‘ಭಾರತೀಯ ಕೈಮಗ್ಗ ಪರಂಪರೆ ಪ್ರದರ್ಶನ’ವನ್ನು ಉದ್ಘಾಟಿಸಿ ಮಾತನಾಡಿದ ಅವರು,ಯಶವಂತಪುರದಲ್ಲಿರುವ ಇಲಾಖೆಯ ಒಂದೂವರೆ ಎಕರೆ ಜಾಗದಲ್ಲಿ ಈ ನೂತನ ಮಾರುಕಟ್ಟೆ ಕಟ್ಟಡ ತಲೆಯೆತ್ತಲಿದೆ. ನಶಿಸಿ ಹೋಗುತ್ತಿರುವ ಕೈಮಗ್ಗ, ಚನ್ನಪಟ್ಟಣದ ಗೊಂಬೆಗಳು, ಕುಂಬಾರಿಕೆ ಸೇರಿದಂತೆ ರಾಜ್ಯದ ಎಲ್ಲಾ ಸಾಂಪ್ರದಾಯಿಕ ಕಲೆಗಳ ಉತ್ಪನ್ನಗಳ ಮಾರಾಟಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

ಬ್ರಾಂಡಿಂಗ್ ಸಮಸ್ಯೆ:

“ನಮ್ಮ ರಾಜ್ಯದ ಕೈಮಗ್ಗ ಉತ್ಪನ್ನಗಳು ಹೊರರಾಜ್ಯಗಳಲ್ಲಿ ಬೇರೆ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟವಾಗುತ್ತಿವೆ. ನಮ್ಮದೇ ಶ್ರಮದ ಉತ್ಪನ್ನಗಳು ಬೇರೆ ಹೆಸರಿನಲ್ಲಿ ಮರಳಿ ರಾಜ್ಯಕ್ಕೆ ಬರುತ್ತಿರುವುದು ವಿಷಾದನೀಯ. ಸ್ಥಳೀಯವಾಗಿ ಬಲಿಷ್ಠ ಮಾರುಕಟ್ಟೆ ಮತ್ತು ಬ್ರಾಂಡಿಂಗ್ ವ್ಯವಸ್ಥೆ ಕಲ್ಪಿಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೈಮಗ್ಗ ಕೇವಲ ಒಂದು ಉತ್ಪಾದನಾ ಕ್ಷೇತ್ರವಲ್ಲ, ಅದು ಭಾರತದ ಸಾಂಸ್ಕೃತಿಕ ಗುರುತು ಮತ್ತು ಜೀವಂತ ಸಂಪ್ರದಾಯವಾಗಿದೆ. ತಲೆಮಾರುಗಳಿಂದ ಈ ಕಲೆಯನ್ನು ಉಳಿಸಿಕೊಂಡು ಬಂದಿರುವ ನೇಕಾರರ ಶ್ರಮದಿಂದಾಗಿ ಇಂದು ಭಾರತೀಯ ಕೈಮಗ್ಗ ಉತ್ಪನ್ನಗಳು ವಿಶ್ವದಾದ್ಯಂತ ಪ್ರಶಂಸೆ ಪಡೆಯುತ್ತಿವೆ ಎಂದು ಸಚಿವರು ಬಣ್ಣಿಸಿದರು.

ಅಂತಿಮ ಹಂತದಲ್ಲಿ ಜವಳಿ ನೀತಿ:

2026-30 ಅವಧಿಯ ನೂತನ ಜವಳಿ ನೀತಿ ಅಂತಿಮ ಹಂತಕ್ಕೆ ಬಂದಿದೆ. ಮೆಗಾ ಮತ್ತು ಮಿನಿ ಇಂಡಸ್ಟ್ರೀಸ್‌ಗಳನ್ನು ಒಂದೇ ಸೂರಿನ ಅಡಿಯಲ್ಲಿ ತರುವ ಪ್ರಯತ್ನ ನಡೆದಿದೆ ಎಂದು ಶಿವಾನಂದ ಪಾಟೀಲ ಹೇಳಿದರು.

ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಪಿಎಂ ಮಿತ್ರ ನೂಲಿನಿಂದ ಬಟ್ಟೆ ಹಂತದವರೆಗೆ ಎಲ್ಲ ಚಟುವಟಿಕೆಗಳು ಪಾರ್ಕ್‌ನಲ್ಲಿ ಒಂದೇ ಸೂರಿನ ಅಡಿಯಲ್ಲಿ ಬರಲಿವೆ. ಈ ಯೋಜನೆ ಅನುಷ್ಠಾನವಾದರೆ ಕರ್ನಾಟಕದಲ್ಲಿ ಮೈಲಿಗಲ್ಲಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಕಾವೇರಿ ಹ್ಯಾಂಡ್‌ಲೂಮ್ ಅಧ್ಯಕ್ಷ ಬಿ.ಜೆ. ಗಣೇಶ್ ಅವರು, ಸಾಂಪ್ರದಾಯಿಕ ಕಲೆಯ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿ ಸಿಗುವಂತಹ ವ್ಯವಸ್ಥೆ ಮಾಡಿಕೊಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.


Share this with Friends

Related Post