Sat. Mar 14th, 2026

ಬಾಗಲಕೋಟೆ ಮೆಡಿಕಲ್ ಕಾಲೇಜು ಸ್ಥಾಪನೆ ಚುನಾವಣೆಗಾಗಿಯಲ್ಲ, ಜನರ ಅಭಿವೃದ್ಧಿಗಾಗಿ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Share this with Friends

ಬಾಗಲಕೋಟೆ: “ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆ ಮತ್ತು ಅಭಿವೃದ್ಧಿ ಕಾಮಗಾರಿಗಳು ಉಪಚುನಾವಣೆಯ ಕಾರಣಕ್ಕಾಗಿ ನಡೆಯುತ್ತಿಲ್ಲ. ಇದು ಜನರ ಅಗತ್ಯತೆ ಮತ್ತು ಬಜೆಟ್‌ನಲ್ಲಿ ನೀಡಿದ ಭರವಸೆಯಂತೆ ನಡೆಯುತ್ತಿರುವ ಕಾರ್ಯ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.

ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಹಂತ-3ರ ಭೂ ಸಂತ್ರಸ್ತರಿಗೆ ಪರಿಹಾರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಜೆಟ್ ಘೋಷಣೆಯಂತೆ ಜಾರಿ:

“ಮೆಡಿಕಲ್ ಕಾಲೇಜು ಸ್ಥಾಪನೆಯನ್ನು ನಾವು 2025ರ ಬಜೆಟ್‌ನಲ್ಲೇ ಘೋಷಿಸಿದ್ದೆವು. ಈಗ ಅದರಂತೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ. ಚುನಾವಣೆ ಬಂದಾಗ ಮಾತ್ರ ಕೆಲಸ ಮಾಡುವ ಜಾಯಮಾನ ನಮ್ಮದಲ್ಲ. ದಿವಂಗತ ಶಾಸಕ ಹೆಚ್.ವೈ.ಮೇಟಿಯವರ ಕನಸಿನಂತೆ ಈ ಯೋಜನೆ ಸಾಕಾರಗೊಳ್ಳುತ್ತಿದೆ,” ಎಂದು ಅವರು ಸ್ಪಷ್ಟಪಡಿಸಿದರು. ಮುಂದಿನ ವರ್ಷ ಇಲ್ಲಿ ಸುಸಜ್ಜಿತ ‘ಸೂಪರ್ ಸ್ಪೆಷಾಲಿಟಿ’ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಗ್ಯಾರಂಟಿ ಹಾಗೂ ಅಭಿವೃದ್ಧಿಗೆ ಸಮಾನ ಆದ್ಯತೆ:

ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, “ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಬಿಜೆಪಿ ಆರೋಪ ಸುಳ್ಳು. ನಾವು ಗ್ಯಾರಂಟಿ ಮತ್ತು ಅಭಿವೃದ್ಧಿ ಎರಡಕ್ಕೂ ಸಮಾನ ಆದ್ಯತೆ ನೀಡುತ್ತಿದ್ದೇವೆ. ವಾರ್ಷಿಕ ಸುಮಾರು 50 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ವ್ಯಯಿಸುತ್ತಿದ್ದು, ಇದುವರೆಗೆ ಒಟ್ಟು 1.22 ಲಕ್ಷ ಕೋಟಿ ರೂ.ಗಳನ್ನು ಜನರ ಖಾತೆಗೆ ತಲುಪಿಸಲಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ನೀಡಲು ಸಾಧ್ಯವಾಗಲಿಲ್ಲ,” ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜು ಹಾಗೂ ಟ್ರಾಮಾ ಸೆಂಟರ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 25 ಜಿಲ್ಲೆಗಳಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಯುಕೆಪಿ ಹಂತ-3,ರೈತರಿಗೆ ಐತಿಹಾಸಿಕ ಭೂ ಪರಿಹಾರ ಘೋಷಣೆ:

ಕೃಷ್ಣಾ ಮೇಲ್ದಂಡೆ ಯೋಜನೆ (UKP) ಹಂತ-3ರ ಭೂ ಸಂತ್ರಸ್ತ ರೈತರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಪರಿಹಾರ ಘೋಷಣೆಯಾಗಿದೆ. ಸ್ವಯಂಪ್ರೇರಣೆಯಿಂದ ಭೂಮಿ ನೀಡುವ ರೈತರ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ಹಾಗೂ ಖುಷ್ಕಿ ಜಮೀನಿಗೆ 30 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 “ಬಿಜೆಪಿ ಅವಧಿಯಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡಲು ಆಸಕ್ತಿ ತೋರದ ಕಾರಣ ಭೂಸ್ವಾಧೀನ ಪ್ರಕ್ರಿಯೆ ಕುಂಠಿತವಾಗಿತ್ತು. ಆದರೆ ನಮ್ಮ ಸರ್ಕಾರ ರೈತರಿಗೆ ಒಂದೇ ಕಂತಿನಲ್ಲಿ ಪರಿಹಾರ ನೀಡಲು ಬದ್ಧವಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಇದಕ್ಕಾಗಿ ಹಣ ಮೀಸಲಿಡಲಾಗಿದ್ದು, ಅಗತ್ಯಬಿದ್ದರೆ ಹೆಚ್ಚಿನ ಅನುದಾನ ಒದಗಿಸಲಾಗುವುದು,” ಎಂದರು.

ಕೇಂದ್ರದ ವಿರುದ್ಧ ವಾಗ್ದಾಳಿ:

ಯುಕೆಪಿ ಮತ್ತು ಮಹಾದಾಯಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುಮತಿಗಳು ಸಿಗುತ್ತಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. “ಹಲವು ಬಾರಿ ಮನವಿ ಸಲ್ಲಿಸಿದರೂ ಕೇಂದ್ರ ಸ್ಪಂದಿಸುತ್ತಿಲ್ಲ. ಆದರೂ ನಮ್ಮ ಸರ್ಕಾರ ಈ ಭಾಗದ ಜನತೆಗೆ ನ್ಯಾಯ ಒದಗಿಸಲು ಮತ್ತು ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸುತ್ತಿದೆ,” ಎಂದು ಹೇಳಿದರು.

8 ಗ್ರಾಮಗಳ ರೈತರಿಗೆ 446 ಕೋಟಿ ರೂ. ಪರಿಹಾರ:

ಯೋಜನೆಯ ವ್ಯಾಪ್ತಿಗೆ ಬರುವ 8 ಗ್ರಾಮಗಳ ಸುಮಾರು 900 ಎಕರೆ ಜಮೀನಿಗೆ ಒಟ್ಟು 446 ಕೋಟಿ ರೂ.ಗಳ ಪರಿಹಾರ ವಿತರಣೆಗೆ ಚಾಲನೆ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ರೈತರ ಹಿತರಕ್ಷಣೆ ನಮ್ಮ ಆದ್ಯತೆ ಎಂದು ಅವರು ಪುನರುಚ್ಚರಿಸಿದರು.


Share this with Friends

Related Post