ಬೆಳಗಾವಿ: ಜಿಲ್ಲೆಯಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಹಬ್ಬ,ಮೆರವಣಿಗೆ ಸೇರಿದಂತೆ ಎಲ್ಲಾ ಕಡೆ ಡಿಜೆ ವ್ಯವಸ್ಥೆಗಳು, ಬೇಸ್ ಬೂಸ್ಟರ್‌ಗಳು ಹಾಗೂ 75 ಡೆಸಿಬಲ್ ಶಬ್ದವರ್ಧಕಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸಂಪೂರ್ಣ ನಿಷೇಧದ ವಿವರ:
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) 2023 ರ ಕಲಂ 163 ರ ಅಡಿಯಲ್ಲಿ ತಮಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಡಿಜೆ ವಾಹನಗಳು ಅಥವಾ 75 ಡೆಸಿಬೆಲ್ ಮೀರಿದ ಶಬ್ದವರ್ಧಕಗಳ ಬಳಕೆಯನ್ನು ನಿರ್ಬಂಧಿಸಿದ್ದಾರೆ. ವಿಶೇಷವಾಗಿ ಆಸ್ಪತ್ರೆ, ಶಾಲೆ, ನ್ಯಾಯಾಲಯ ಹಾಗೂ ಧಾರ್ಮಿಕ ಸ್ಥಳಗಳ 100 ಮೀಟರ್ ವ್ಯಾಪ್ತಿಯನ್ನು ‘ನಿಶ್ಯಬ್ದ ವಲಯ’ (Silent Zone) ಎಂದು ಘೋಷಿಸಲಾಗಿದ್ದು, ಇಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ.
ಜಿಲ್ಲೆಯಾದ್ಯಂತ ರಾತ್ರಿ 10:00 ಗಂಟೆಯಿಂದ ಬೆಳಿಗ್ಗೆ 6:00 ಗಂಟೆಯವರೆಗೆ ಯಾವುದೇ ರೀತಿಯ ಡಿಜೆ ಅಥವಾ ಅತಿಯಾದ ಶಬ್ದ ಮಾಡುವ ಉಪಕರಣಗಳನ್ನು ಬಳಸುವಂತಿಲ್ಲ. ಮೆರವಣಿಗೆ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅತ್ಯಗತ್ಯವಿದ್ದಲ್ಲಿ ಮಾತ್ರ ಪೊಲೀಸ್ ಇಲಾಖೆಯಿಂದ ಪೂರ್ವ ಲಿಖಿತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಉಲ್ಲಂಘಿಸಿದರೆ ಕಠಿಣ ಕ್ರಮ:
ಈ ಆದೇಶವನ್ನು ಮೀರಿ ಡಿಜೆ ಬಳಸಿದರೆ ಉಪಕರಣಗಳನ್ನು ಜಪ್ತಿ ಮಾಡುವುದು, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ. ಅಲ್ಲದೆ, ನಿಯಮ ಉಲ್ಲಂಘನೆಯಾದಲ್ಲಿ ಆಯೋಜಕರೇ ವೈಯಕ್ತಿಕವಾಗಿ ಹೊಣೆಗಾರರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.
ತಕ್ಷಣದಿಂದಲೇ ಈ ಆದೇಶ ಜಾರಿಗೆ ತರುವಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ.

