ಬಾಗಲಕೋಟೆ: ಸ್ಥಳೀಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ತಮ್ಮ ಮೊದಲ ಸೆಟ್ ನಾಮಪತ್ರವನ್ನು ಸಲ್ಲಿಸಿದರು.
ತಮ್ಮ ಪತ್ನಿ ರಾಜೇಶ್ವರಿ ಚರಂತಿಮಠ ಅವರೊಂದಿಗೆ ನಗರದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಅವರು, ಚುನಾವಣಾಧಿಕಾರಿ ಸಂತೋಷ್ ಜಗಲಾಸರ್ ಅವರಿಗೆ ಅಧಿಕೃತವಾಗಿ ನಾಮಪತ್ರ ಹಸ್ತಾಂತರಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಅಭ್ಯರ್ಥಿಯು ಭಕ್ತಿಯಿಂದ ಗೋಪೂಜೆ ನೆರವೇರಿಸಿ ಚುನಾವಣಾ ಕಣಕ್ಕೆ ಇಳಿದರು.
ಮಾಧ್ಯಮಗಳೊಂದಿಗೆ ಮಾತುಕತೆ:
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ವೀರಣ್ಣ ಚರಂತಿಮಠ, “ಇಂದು ಸಾಂಕೇತಿಕವಾಗಿ ಮೊದಲ ಸೆಟ್ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಮಾರ್ಚ್ 23ರ ಸೋಮವಾರದಂದು ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ಬೃಹತ್ ಮೆರವಣಿಗೆಯ ಮೂಲಕ ಎರಡನೇ ಸೆಟ್ ನಾಮಪತ್ರವನ್ನು ಸಲ್ಲಿಸಲಾಗುವುದು” ಎಂದು ತಿಳಿಸಿದರು.
“ಕ್ಷೇತ್ರದ ಮತದಾರರ ಆಶೀರ್ವಾದ ನಮ್ಮ ಮೇಲಿದೆ. ಮಾರ್ಚ್ 24 ರಿಂದ ಕ್ಷೇತ್ರಾದ್ಯಂತ ಮನೆ-ಮನೆ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲಾಗುವುದು. ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಾಲಿ ಶಾಸಕರಾಗಿದ್ದ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

