ದಾವಣಗೆರೆ: “ಕಾಂಗ್ರೆಸ್ ಪಕ್ಷದಲ್ಲಿ ಜನಪ್ರಿಯ ನಾಯಕರು ಮೃತಪಟ್ಟಾಗ, ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿ ಗೌರವಿಸುವ ಸುದೀರ್ಘ ಸಂಪ್ರದಾಯ ಮತ್ತು ವಾಡಿಕೆಯನ್ನು ಪಕ್ಷ ಬೆಳೆಸಿಕೊಂಡು ಬಂದಿದೆ. ಅದರಂತೆಯೇ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಲಾಗಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಂಡು ಅವರು ಮಾತನಾಡಿದರು.
ಪರಂಪರೆಯ ಮುಂದುವರಿಕೆ:
ಈ ಕ್ಷೇತ್ರದ ಇತಿಹಾಸವನ್ನು ಸ್ಮರಿಸಿದ ಸಿಎಂ, “ಶಾಮನೂರು ಶಿವಶಂಕರಪ್ಪನವರು ಆರು ಬಾರಿ ಶಾಸಕರಾಗಿ, ಸಂಸದರಾಗಿ ಮತ್ತು ಮಂತ್ರಿಯಾಗಿ ಅಪಾರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರ ಪುತ್ರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಹ ಎರಡು ಬಾರಿ ಶಾಸಕರಾಗಿ ಜನರ ಮನ ಗೆದ್ದಿದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು, ಈ ಪರಂಪರೆಯನ್ನು ಮುಂದುವರಿಸಲು ಸಮರ್ಥ್ ಅವರಿಗೆ ಅವಕಾಶ ನೀಡಲಾಗಿದೆ,” ಎಂದರು.
ಗ್ಯಾರಂಟಿ ಜಾರಿಯಲ್ಲಿ ಜಿಲ್ಲೆ ಪ್ರಥಮ:
“ದಾವಣಗೆರೆ ಜಿಲ್ಲೆಯು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ. ನಾವು ಕೇವಲ ಭರವಸೆ ನೀಡುವುದಿಲ್ಲ, ನುಡಿದಂತೆ ನಡೆಯುತ್ತೇವೆ ಎಂಬುದು ಬಜೆಟ್ ಮೂಲಕ ಸಾಬೀತಾಗಿದೆ. ಮಹಿಳೆಯರು, ರೈತರು, ಅಲ್ಪಸಂಖ್ಯಾತರು ಹಾಗೂ ಕಾರ್ಮಿಕರು ಸೇರಿದಂತೆ ಸರ್ವ ಜನಾಂಗದ ಅಭಿವೃದ್ಧಿಯೇ ಕಾಂಗ್ರೆಸ್‌ನ ಮೂಲ ಮಂತ್ರ. ಹೀಗಾಗಿ ಈ ಉಪಚುನಾವಣೆಯಲ್ಲಿ ಜನತೆ ನಮ್ಮ ಕೈ ಹಿಡಿಯಲಿದ್ದಾರೆ,” ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು
ಹಿಂದಿನ ಉಪಚುನಾವಣೆಗಳೇ ಸಾಕ್ಷಿ:
“ಕಳೆದ ಉಪಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಸಾಬೀತಾಗಿದೆ. ಶಿಗ್ಗಾಂವ್‌ನಲ್ಲಿ 12 ಸಾವಿರ, ಸಂಡೂರಿನಲ್ಲಿ 9 ಸಾವಿರ ಹಾಗೂ ಚನ್ನಪಟ್ಟಣದಲ್ಲಿ 25 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಈ ಗೆಲುವಿನ ಸರಣಿ ದಾವಣಗೆರೆಯಲ್ಲೂ ಮುಂದುವರಿಯಲಿದ್ದು, ಇದು 2028ರ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಟುಂಬ ರಾಜಕಾರಣದ ಟೀಕೆಗೆ ತಿರುಗೇಟು:
ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣವಿದೆ ಎಂಬ ಟೀಕೆಯನ್ನು ತಳ್ಳಿಹಾಕಿದ ಸಿಎಂ, “ಇದು ಕುಟುಂಬ ರಾಜಕಾರಣವಲ್ಲ, ಬದಲಿಗೆ ಪಕ್ಷದ ಕಾರ್ಯಕರ್ತರ ಒಮ್ಮತದ ತೀರ್ಮಾನ. ಶಾಮನೂರು ಶಿವಶಂಕರಪ್ಪ ಅವರು 6 ಬಾರಿ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರು 2 ಬಾರಿ ಶಾಸಕರಾಗಿ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಜನಪರ ಕೆಲಸಗಳು ಈ ಬಾರಿಯೂ ನಮ್ಮನ್ನು ಕೈಹಿಡಿಯಲಿವೆ,” ಎಂದರು.
ಬಂಡಾಯ ಶಮನದ ಭರವಸೆ:
“ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಾದಿಕ್ ಪೈಲ್ವಾನ್ ಅವರು ಮೂಲತಃ ಕಾಂಗ್ರೆಸ್‌ನವರೇ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅಸಮಾಧಾನವನ್ನು ಶಮನಗೊಳಿಸಲಾಗುವುದು. ದಾವಣಗೆರೆ ಜಿಲ್ಲೆಯು ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದು, ಅಭಿವೃದ್ಧಿಯ ಮಂತ್ರವೇ ನಮಗೆ ಶ್ರೀರಕ್ಷೆ,” ಎಂದು ಸಿದ್ದರಾಮಯ್ಯ ತಿಳಿಸಿದರು.

