Sat. Jun 6th, 2026

ವಿಕಲಚೇತನರ ಸ್ವಯಂ ಉದ್ಯೋಗಕ್ಕೆ ವಿಶೇಷ ಯೋಜನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ

Share this with Friends

ಪಾಂಡವಪುರ: ವಿಕಲಚೇತನರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪೂರಕವಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಸ್ವಯಂ ಉದ್ಯೋಗ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಶೇ. 5ರಷ್ಟು ಮೀಸಲು ನಿಧಿಯ ಚೆಕ್ ವಿತರಿಸಿ ಅವರು ಮಾತನಾಡಿದರು.

ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನದ ಅಗತ್ಯ:

“ಸ್ಥಳೀಯ ಸಮಸ್ಯೆಗಳು ಬೆಂಗಳೂರಿನಲ್ಲಿ ಕುಳಿತವರಿಗೆ ತಿಳಿಯುವುದಿಲ್ಲ. ಪಂಚಾಯಿತಿ ಮಟ್ಟದಲ್ಲಿ ಜನರ ಸಂಕಷ್ಟಗಳ ಅರಿವಿರುತ್ತದೆ. ಹಾಗಾಗಿ, ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ನಾವು ಹೋರಾಟ ನಡೆಸುತ್ತಿದ್ದೇವೆ,” ಎಂದರು. ಸ್ವಂತ ಸಂಪನ್ಮೂಲದಿಂದ ವಿಕಲಚೇತನರಿಗೆ ನೆರವು ನೀಡುತ್ತಿರುವ ಕ್ಯಾತನಹಳ್ಳಿ ಪಂಚಾಯಿತಿಯ ಕಾರ್ಯವನ್ನು ಅವರು ಶ್ಲಾಘಿಸಿದರು.

ಮನೆ ಬಾಗಿಲಿಗೆ ಬರಲಿದೆ ಸೌಲಭ್ಯ:

ಮೇಲುಕೋಟೆ ಕ್ಷೇತ್ರದಲ್ಲಿ ಸುಮಾರು 3,800 ರಿಂದ 4,000 ವಿಕಲಚೇತನರಿದ್ದಾರೆ ಎಂದು ಗುರುತಿಸಲಾಗಿದೆ. “ಕೇವಲ ಹಣಕಾಸಿನ ನೆರವು ನೀಡಿದರೆ ಅದು ಖರ್ಚಾಗಿ ಹೋಗುತ್ತದೆ. ಅದರ ಬದಲು, ವಿಕಲಚೇತನರು ಮನೆಯಲ್ಲೇ ಇದ್ದು ಕೆಲಸ ಮಾಡುವಂತಹ ಅಥವಾ ನಿರಂತರ ಆದಾಯ ತರುವಂತಹ ಉದ್ಯೋಗದ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಶೀಘ್ರದಲ್ಲೇ ನಮ್ಮ ತಂಡವು ಪ್ರತಿ ಮನೆಗೆ ಭೇಟಿ ನೀಡಿ ವಿಕಲಚೇತನರ ಅಗತ್ಯತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ,” ಎಂದು ಶಾಸಕರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

 


Share this with Friends

Related Post