ಬೆಂಗಳೂರು: ನಿಮ್ಮ ಹೆಸರು ನೀವು ವಾಸವಿರುವ ವಾರ್ಡ್ ಬಿಟ್ಟು ಬೇರೆ ವಾರ್ಡ್‌ನ ಮತದಾರರ ಪಟ್ಟಿಯಲ್ಲಿದೆಯೇ? ಹಾಗಿದ್ದಲ್ಲಿ ತಕ್ಷಣವೇ ದೂರು ಸಲ್ಲಿಸಿ ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ 2026ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮಾರ್ಚ್ 30ರವರೆಗೆ ವಿಸ್ತರಿಸಲಾಗಿದೆ.
ಹೆಸರು ಪರಿಶೀಲನೆ ಕಡ್ಡಾಯ:
ಮತದಾರರು ತಮ್ಮ ಸಾಮಾನ್ಯ ನಿವಾಸವಿರುವ ವಾರ್ಡ್‌ನಲ್ಲಿಯೇ ಹೆಸರು ನೋಂದಾಯಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಒಂದು ವೇಳೆ ಹೆಸರು ಅದಲುಬದಲಾಗಿದ್ದರೆ ಅಥವಾ ತಪ್ಪು ವಾರ್ಡ್‌ನಲ್ಲಿ ನಮೂದಾಗಿದ್ದರೆ, ಕೂಡಲೇ ಸಂಬಂಧಪಟ್ಟ ನಗರ ಪಾಲಿಕೆ ಕಚೇರಿ, ಮತದಾರರ ನೋಂದಣಾಧಿಕಾರಿಗಳ ಕಚೇರಿ ಅಥವಾ ವಾರ್ಡ್ ಕಚೇರಿಗಳಲ್ಲಿ ಲಿಖಿತ ದೂರು ಸಲ್ಲಿಸಬಹುದಾಗಿದೆ.
ಆನ್‌ಲೈನ್‌ನಲ್ಲೂ ಲಭ್ಯ:
ಸಾರ್ವಜನಿಕರು ಕಚೇರಿಗಳಿಗೆ ಅಲೆಯುವ ಬದಲು gba.karnataka.gov.in/electoral2026 ವೆಬ್‌ಸೈಟ್‌ಗೆ ಭೇಟಿ ನೀಡಿ, ‘Search by Name’ ಅಥವಾ ‘Search by EPIC’ ಮೂಲಕ ತಮ್ಮ ವಿವರಗಳನ್ನು ಮನೆಯಲ್ಲೇ ಕುಳಿತು ಪರಿಶೀಲಿಸಬಹುದು. ವಾರ್ಡ್ ಕಚೇರಿಗಳಲ್ಲೂ ಕರಡು ಪಟ್ಟಿಯ ಪ್ರತಿಗಳನ್ನು ವೀಕ್ಷಣೆಗೆ ಇರಿಸಲಾಗಿದೆ.
ವೇಳಾಪಟ್ಟಿ ಬದಲಾವಣೆ:
ಪರಿಷ್ಕರಣಾ ಕಾರ್ಯದ ಒತ್ತಡದ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಲಾಗಿದೆ. ಈ ಮೊದಲು ಏಪ್ರಿಲ್ 6ಕ್ಕೆ ನಿಗದಿಯಾಗಿದ್ದ ಪಟ್ಟಿಯು ಈಗ ಏಪ್ರಿಲ್ 06 ರಿಂದ 18ರ ಅವಧಿಯಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರು ಈ ವಿಸ್ತರಿತ ಅವಧಿಯ ಸದುಪಯೋಗ ಪಡೆದುಕೊಂಡು ತಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಲು ಕೋರಲಾಗಿದೆ.

