Sat. Jun 6th, 2026

ಒತ್ತಡಕ್ಕೆ ಮಣಿಯಲ್ಲ, ಕಣದಿಂದ ಹಿಂದೆ ಸರಿಯಲ್ಲ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಪಟ್ಟು

Share this with Friends

ದಾವಣಗೆರೆ: “ನನ್ನ ಮೇಲೆ ಪಕ್ಷದ ನಾಯಕರಿಂದ ಸಾಕಷ್ಟು ಒತ್ತಡಗಳು ಬರುತ್ತಿವೆ. ಆದರೆ ನಾನು ಯಾವುದಕ್ಕೂ ಮಣಿಯುವುದಿಲ್ಲ. ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಗುಡುಗಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ದೀರ್ಘಕಾಲದವರೆಗೆ ಕಾಂಗ್ರೆಸ್ ನಿಷ್ಠಾವಂತರಾಗಿದ್ದ  ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದೆವು. ಆದರೆ ಪಕ್ಷವು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ಘೋಷಿಸಿತು, “ಸಮುದಾಯದ ಹಿತದೃಷ್ಟಿಯಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಭಾವಿ ನಾಯಕರು ಮನವೊಲಿಸಲು ಪ್ರಯತ್ನ ನಡೆಸಿದ್ದಾರೆ. ಆದರೂ, “ನಾನು ಕುಸ್ತಿ ಪೈಲ್ವಾನ್, ಅಖಾಡಕ್ಕೆ ಇಳಿದ ಮೇಲೆ ಹಿಂದೆ ಸರಿಯುವ ಜಾಯಮಾನ ನನ್ನದಲ್ಲ” ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ನಡುಕ ಹುಟ್ಟಿಸಿದ್ದಾರೆ.

ತ್ರಿಕೋನ ಸ್ಪರ್ಧೆ ಸಾಧ್ಯತೆ:

ಸಾದಿಕ್ ಪೈಲ್ವಾನ್ ಸ್ಪರ್ಧೆಯಿಂದಾಗಿ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗುವ ಆತಂಕ ಕಾಂಗ್ರೆಸ್ ಪಾಳಯದಲ್ಲಿದೆ. ಇದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರಿಗೆ ಪರೋಕ್ಷವಾಗಿ ವರದಾನವಾಗಲಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

ನಾಮಪತ್ರ ವಾಪಸ್ ಪಡೆಯಲು ಮಾರ್ಚ್ 26 ಕೊನೆಯ ದಿನವಾಗಿದ್ದು, ಅಂತಿಮ ಕ್ಷಣದಲ್ಲಿ ಸಾದಿಕ್ ಪೈಲ್ವಾನ್ ಅವರ ನಿಲುವು ಬದಲಾಗುತ್ತದೆಯೇ ಅಥವಾ ಕಣದಲ್ಲಿ ಉಳಿದು ಮೈತ್ರಿ-ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

 


Share this with Friends

Related Post