Sat. Jun 6th, 2026

ಐಪಿಎಲ್: ಮಾರ್ಚ್ 28ರಂದು ಮಧ್ಯರಾತ್ರಿಯವರೆಗೆ ‘ನಮ್ಮ ಮೆಟ್ರೋ’ ಸಂಚಾರ ವಿಸ್ತರಣೆ

Share this with Friends

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28ರಂದು ನಡೆಯಲಿರುವ ಟಾಟಾ ಐಪಿಎಲ್ ಟಿ-20 ಪಂದ್ಯದ ಹಿನ್ನೆಲೆಯಲ್ಲಿ, ಕ್ರಿಕೆಟ್ ಪ್ರೇಮಿಗಳ ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತನ್ನ ಸೇವಾ ಅವಧಿಯನ್ನು ವಿಸ್ತರಿಸಿದೆ. ಅಂದು ರಾತ್ರಿ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯು ಮಧ್ಯರಾತ್ರಿ 12:30 ರಿಂದ ಮುಂಜಾನೆ 2:00 ಗಂಟೆಯವರೆಗೆ ಲಭ್ಯವಿರಲಿದೆ.

ನಿಲ್ದಾಣಗಳಿಂದ ಕೊನೆಯ ರೈಲು ಹೊರಡುವ ವೇಳಾಪಟ್ಟಿ:

ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್): ನಾಲ್ಕೂ ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡಲಿದೆ.

ವೈಟ್‌ಫೀಲ್ಡ್ (ಕಾಡುಗೋಡಿ): ರಾತ್ರಿ 12:30ಕ್ಕೆ.

ಚೆಲ್ಲಘಟ್ಟ, ರೇಷ್ಮೆ ಸಂಸ್ಥೆ ಹಾಗೂ ಮಾದಾವರ: ರಾತ್ರಿ 12:45ಕ್ಕೆ.

ಬೊಮ್ಮಸಂದ್ರ: ರಾತ್ರಿ 01:00ಕ್ಕೆ.

ಆರ್.ವಿ. ರಸ್ತೆ: ರಾತ್ರಿ 02:00 ಗಂಟೆಗೆ ಕೊನೆಯ ಸೇವೆ ಇರಲಿದೆ.

ವಾಹನ ದಟ್ಟಣೆ ನಿಯಂತ್ರಣಕ್ಕೆ ವಿಶೇಷ ಕ್ರಮ:

ನಗರದ ಕೇಂದ್ರ ವ್ಯವಹಾರ ಪ್ರದೇಶ (CBD) ಹಾಗೂ ಕ್ರೀಡಾಂಗಣದ ಸುತ್ತಮುತ್ತ ಸಂಚಾರ ದಟ್ಟಣೆ ತಪ್ಪಿಸಲು ಬಿಎಂಆರ್‌ಸಿಎಲ್ ಮಹತ್ವದ ಸಲಹೆ ನೀಡಿದೆ. ಪ್ರೇಕ್ಷಕರು ತಮ್ಮ ವಾಹನಗಳನ್ನು ನಿಗದಿತ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿ, ಮೆಟ್ರೋ ಮೂಲಕವೇ ಕ್ರೀಡಾಂಗಣಕ್ಕೆ ಸಮೀಪವಿರುವ ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ನಿಲ್ದಾಣಗಳಿಗೆ ಪ್ರಯಾಣಿಸಲು ಕೋರಲಾಗಿದೆ. ಕಬ್ಬನ್ ರಸ್ತೆ ಗೇಟ್ ಬಳಸುವವರು ಕಬ್ಬನ್ ಪಾರ್ಕ್ ನಿಲ್ದಾಣ ಹಾಗೂ ಲಿಂಕ್ ರಸ್ತೆ ಗೇಟ್ ಬಳಸುವವರು ಎಂ.ಜಿ. ರಸ್ತೆ ನಿಲ್ದಾಣವನ್ನು ಬಳಸಬಹುದಾಗಿದೆ.

ಪ್ರಯಾಣಿಕರ ಗಮನಕ್ಕೆ:

ಸಂಯೋಜಿತ ಕ್ಯೂಆರ್ ಟಿಕೆಟ್: ಐಪಿಎಲ್ ಟಿಕೆಟ್‌ಗಳಲ್ಲೇ ಮೆಟ್ರೋದ ‘ಟು-ವೇ’ (ಹೋಗಿ ಬರಲು) ಕ್ಯೂಆರ್ ಕೋಡ್ ಮುದ್ರಿತವಾಗಿರುತ್ತದೆ ಅಥವಾ ಡಿಜಿಟಲ್ ಟಿಕೆಟ್‌ನೊಂದಿಗೆ ಲಭ್ಯವಿರುತ್ತದೆ.

ರಿಯಾಯಿತಿ ದರದ ಪಾರ್ಕಿಂಗ್: ಪಂದ್ಯದ ದಿನದಂದು ದ್ವಿಚಕ್ರ ವಾಹನಗಳಿಗೆ ₹30 ಹಾಗೂ ಕಾರುಗಳಿಗೆ ₹60 ನಿಗದಿತ ಪಾರ್ಕಿಂಗ್ ದರವಿರಲಿದ್ದು, ಇದು ಅಂದಿನ ಮೆಟ್ರೋ ಸೇವೆ ಮುಕ್ತಾಯದವರೆಗೆ ಮಾನ್ಯವಾಗಿರುತ್ತದೆ.

ಸುರಕ್ಷತಾ ನಿಯಮಗಳು: ಜನದಟ್ಟಣೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಅಗತ್ಯಬಿದ್ದಲ್ಲಿ ನಿಲ್ದಾಣದ ಪ್ರವೇಶ ದ್ವಾರಗಳನ್ನು ತಾತ್ಕಾಲಿಕವಾಗಿ ನಿಯಂತ್ರಿಸುವ ಅಥವಾ ಮುಚ್ಚುವ ಹಕ್ಕನ್ನು ಬಿಎಂಆರ್‌ಸಿಎಲ್ ಹೊಂದಿರುತ್ತದೆ. ಪ್ರಯಾಣಿಕರು ಪೊಲೀಸ್ ಮತ್ತು ಮೆಟ್ರೋ ಸಿಬ್ಬಂದಿಯೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.

 


Share this with Friends

Related Post