Sat. Jun 6th, 2026

ಐಪಿಎಲ್ ಸಂಭ್ರಮದ ವೇಳೆ ಮೃತಪಟ್ಟ ಆರ್‌ಸಿಬಿ ಅಭಿಮಾನಿಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸ್ಮಾರಕ ಅನಾವರಣ

Share this with Friends

ಬೆಂಗಳೂರು: ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಮಂದಿ ಅಭಿಮಾನಿಗಳ ಸವಿನೆನಪಿಗಾಗಿ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಸ್ಮಾರಕವನ್ನು ಗೃಹ ಸಚಿವ ಜಿ. ಪರಮೇಶ್ವರ್ ಅವರು ಅನಾವರಣಗೊಳಿಸಿದರು.

ಬುಧವಾರ ನಡೆದ ಸಮಾರಂಭದಲ್ಲಿ ಮೃತ ಅಭಿಮಾನಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದ ಗೃಹ ಸಚಿವರು, ಕ್ರೀಡಾ ಅಭಿಮಾನಿಗಳ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಪರಮೇಶ್ವರ, “ಅಭಿಮಾನಿಗಳೇ ಕ್ರೀಡೆಯ ಜೀವಾಳ. ಅವರ ಉತ್ಸಾಹ ಮತ್ತು ಬೆಂಬಲದಿಂದಲೇ ತಂಡಗಳು ಯಶಸ್ಸು ಕಾಣುತ್ತವೆ. ಆದರೆ ಇಂತಹ ಘಟನೆಯಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಈ ಸ್ಮಾರಕವು ಕೇವಲ ಕಲ್ಲಲ್ಲ, ಅದು ಅಭಿಮಾನಿಗಳ ನಿಷ್ಠೆ ಮತ್ತು ಅವರ ಕುಟುಂಬದ ನೋವಿನ ಸಂಕೇತವಾಗಿದೆ,” ಎಂದು ಭಾವುಕರಾಗಿ ನುಡಿದರು.

ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಾತನಾಡಿ, “ಕ್ರೀಡಾಂಗಣಕ್ಕೆ ಬರುವ ಪ್ರತಿಯೊಬ್ಬ ಅಭಿಮಾನಿಯ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಈ ಕಹಿ ಘಟನೆಯಿಂದ ನಾವು ಪಾಠ ಕಲಿಯಬೇಕಿದೆ. ಮೃತರ ಕುಟುಂಬದ ಜೊತೆಗೆ ಕೆಎಸ್‌ಸಿಎ ಸದಾ ಇರಲಿದೆ,” ಎಂದರು.

ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಅವರು ಮೃತರ ತ್ಯಾಗವನ್ನು ಸ್ಮರಿಸುತ್ತಾ, ತಂಡದ ಪ್ರತಿಯೊಂದು ಗೆಲುವಿನಲ್ಲೂ ಈ ಅಭಿಮಾನಿಗಳ ಪಾಲು ಇರುತ್ತದೆ ಎಂದು ತಿಳಿಸಿದರು.

ಶಾಸಕ ಎನ್.ಎ. ಹ್ಯಾರೀಸ್ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಕುಮಾರ್ ಅವರು ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬಿದರು. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಕೆಎಸ್‌ಸಿಎ ಪದಾಧಿಕಾರಿಗಳಾದ ಸಂತೋಷ್ ಮೆನನ್ ಮತ್ತು ಸುಜಿತ್ ಸೋಮಸುಂದರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮೃತರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.

 

 


Share this with Friends

Related Post