ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕತ್ವದ ಬದಲಾವಣೆಯ ನಂತರ, ತಂಡದ ಹೊಸ ಆಡಳಿತ ಮಂಡಳಿಯ ಸದಸ್ಯೆ ಹಾಗೂ ಗಾಯಕಿ ಅನನ್ಯ ಬಿರ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಕನ್ನಡಿಗರ ಮತ್ತು ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದೆ.
ಇತ್ತೀಚೆಗಷ್ಟೇ ಆದಿತ್ಯ ಬಿರ್ಲಾ ಸಮೂಹವು ಭಾರಿ ಮೊತ್ತಕ್ಕೆ ಆರ್‌ಸಿಬಿ ತಂಡವನ್ನು ಖರೀದಿಸಿದ್ದು, ಈ ಹೊಸ ಪಯಣದ ಆರಂಭದ ಸಂಕೇತವಾಗಿ ಅನನ್ಯ ಬಿರ್ಲಾ ಅವರು ಕನ್ನಡಿಗರ ನೆಚ್ಚಿನ ಘೋಷಣೆಯಾದ “ಈ ಸಲ ಕಪ್ ನಮ್ದು” (Ee Sala Cup Naamdu 💫🙏🏽) ಎಂದು ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯ ಮುಖಪುಟದಲ್ಲಿ ಬರೆಯುವ ಮೂಲಕ ತಂಡದ ಮೇಲಿರುವ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳೇ ನಮ್ಮ ಶಕ್ತಿ:
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಂಡದ ಲೋಗೋ ಹಂಚಿಕೊಂಡಿರುವ ಅವರು, “ನಾವೆಲ್ಲರೂ ಸಿದ್ಧರಾಗೋಣ, ಲೆಟ್ಸ್ ಗೋ ಆರ್‌ಸಿಬಿ” ಎಂದು ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ, “ಇದು ನಮ್ಮ ಬಗ್ಗೆ ಅಲ್ಲ, ಇದು ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಬಗ್ಗೆ. ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಚಿರಋಣಿ. ನಾವು ಈ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಐತಿಹಾಸಿಕ ಬದಲಾವಣೆ:
ಸುಮಾರು ₹16,706 ಕೋಟಿ ಮೊತ್ತದ ಈ ಐತಿಹಾಸಿಕ ಒಪ್ಪಂದದ ನಂತರ, ಆರ್ಯಮನ್ ವಿಕ್ರಮ್ ಬಿರ್ಲಾ ಅವರು ತಂಡದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತಂಡದ ಹೆಸರು ಅಥವಾ ಮೂಲ ಗುರುತಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮ್ಯಾನೇಜ್‌ಮೆಂಟ್ ಈಗಾಗಲೇ ಸ್ಪಷ್ಟಪಡಿಸಿರುವುದು ಅಭಿಮಾನಿಗಳಲ್ಲಿ ಸಮಾಧಾನ ತಂದಿದೆ.
ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದೊಂದಿಗೆ ಆರ್‌ಸಿಬಿ ತನ್ನ ಹೊಸ ಅಧ್ಯಾಯವನ್ನು ಆರಂಭಿಸುತ್ತಿದೆ. ಹೊಸ ಮಾಲೀಕತ್ವ ಮತ್ತು ಅನನ್ಯ ಬಿರ್ಲಾ ಅವರ ಈ ಪೋಸ್ಟ್ ತಂಡಕ್ಕೆ ಹೊಸ ಅದೃಷ್ಟ ತರಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.

