ದಾವಣಗೆರೆ: “ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿದೆಯೇ ಹೊರತು ಅವರ ಅಭಿವೃದ್ಧಿಗೆ ಶ್ರಮಿಸಿಲ್ಲ. ಈ ಬಾರಿ ಅಲ್ಪಸಂಖ್ಯಾತ ಮತದಾರರೇ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದಾರೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.
ಉಪಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರ ಗೆಲುವು ನಿಶ್ಚಿತ.”ದಶಕಗಳಿಂದ ಈ ಕ್ಷೇತ್ರ ಕಾಂಗ್ರೆಸ್ ಹಿಡಿತದಲ್ಲಿದ್ದರೂ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಂಡಿಲ್ಲ. ಇದರಿಂದ ಬೇಸತ್ತಿರುವ ಮತದಾರರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದ ಉಪಚುನಾವಣೆ ಫಲಿತಾಂಶವು ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯಾಗಲಿದೆ,” ಎಂದರು.
ಸಾಮಾನ್ಯ ಕಾರ್ಯಕರ್ತನಿಗೆ ಮನ್ನಣೆ:
“ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಒಬ್ಬ ಸಾಮಾನ್ಯ ವ್ಯಕ್ತಿ. ಅವರನ್ನು ಗೆಲ್ಲಿಸುವ ಮೂಲಕ ಬಡವರು, ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ನ್ಯಾಯ ಒದಗಿಸಲು ಮತದಾರರು ಸಂಕಲ್ಪ ಮಾಡಿದ್ದಾರೆ. ಆರಂಭದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಸಣ್ಣಪುಟ್ಟ ಗೊಂದಲಗಳಿದ್ದರೂ, ಈಗ ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ,” ಎಂದು ವಿವರಿಸಿದರು.
ಕಾರ್ಯಕರ್ತರ ಶ್ರಮ:
ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿಯೂ ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಬಾರಿ ಹಣಬಲ ಮತ್ತು ತೋಳ್ಬಲದ ರಾಜಕಾರಣ ನಡೆಯುವುದಿಲ್ಲ. ಎನ್‍ಡಿಎ ಅಭ್ಯರ್ಥಿ ದೊಡ್ಡ ಅಂತರದಿಂದ ಜಯಗಳಿಸಲಿದ್ದಾರೆ ಎಂಬ ಭರವಸೆಯನ್ನು ವಿಜಯೇಂದ್ರ ಅವರು ವ್ಯಕ್ತಪಡಿಸಿದರು
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯಲ್ಲಿ ದಾಖಲೆ ಬರೆದಿರಬಹುದು. ಆದರೆ ಆ ಬಜೆಟ್‌ನಿಂದ ರಾಜ್ಯಕ್ಕಾಗಲಿ ಅಥವಾ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕಾಗಲಿ ಯಾವುದೇ ಲಾಭವಾಗಿಲ್ಲ. ಅಭಿವೃದ್ಧಿ ಶೂನ್ಯವಾಗಿರುವ ಈ ಬಜೆಟ್ ಕೇವಲ ಅಂಕಿ-ಅಂಶಗಳ ಆಟವಾಗಿದೆ. ಐದು ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಲಿದೆ,” ಎಂದು ಭವಿಷ್ಯ ನುಡಿದರು.
ಬಿಜೆಪಿ ಅವಧಿಯಲ್ಲೇ ಅಭಿವೃದ್ಧಿ ಪರ್ವ:
ದಾವಣಗೆರೆಯ ನೈಜ ಅಭಿವೃದ್ಧಿ ಆಗಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾತ್ರ. ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದರು. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಪರಿಶ್ರಮದಿಂದ ಸ್ಮಾರ್ಟ್ ಸಿಟಿ ಯೋಜನೆಗೆ ಕೋಟ್ಯಂತರ ರೂಪಾಯಿ ಅನುದಾನ ಹರಿದುಬಂದಿದೆ ಎಂದು ಅವರು ಸ್ಮರಿಸಿದರು.
ದಿಗ್ಗಜರ ಪ್ರಚಾರದ ಅಬ್ಬರ:
ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಬಲಿಷ್ಠ ನಾಯಕರ ದಂಡೇ ದಾವಣಗೆರೆಗೆ ಬರಲಿದೆ. ಮಾಜಿ ಸಿಎಂಗಳಾದ ಯಡಿಯೂರಪ್ಪ, ಬೊಮ್ಮಾಯಿ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರಮುಖರು ಇಂದಿನಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಇದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

