ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಸೇವೆಯನ್ನು ಮುಂದುವರಿಸುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆದೇಶವು ಸಂಪೂರ್ಣ ನಕಲಿ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?:
ಆರ್ಥಿಕ ಇಲಾಖೆಯ ಹೆಸರಿನಲ್ಲಿ ಸಂ.ಆಇ/ಸೇನಿ/08/2026, ದಿನಾಂಕ: 24/03/2026 ರಂದು ಹೊರಡಿಸಲಾಗಿದೆ ಎನ್ನಲಾದ ಅಧಿಕೃತ ಜ್ಞಾಪನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಆರ್ಥಿಕ ಇಲಾಖೆಯು ಇಂತಹ ಯಾವುದೇ ಆದೇಶ ಅಥವಾ ಜ್ಞಾಪನವನ್ನು ಹೊರಡಿಸಿಲ್ಲ. ಕಿಡಿಗೇಡಿಗಳು ಇಲಾಖೆಯ ಹೆಸರನ್ನು ಬಳಸಿ ಈ ನಕಲಿ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಮಾಧ್ಯಮಗಳಿಗೆ ಸೂಚನೆ:
ಕೆಲವು ದಿನಪತ್ರಿಕೆಗಳು ಮತ್ತು ಆನ್‌ಲೈನ್ ಸುದ್ದಿ ಸಂಸ್ಥೆಗಳು ಈ ಆದೇಶದ ನೈಜತೆಯನ್ನು ಪರಿಶೀಲಿಸದೆ ವರದಿ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಸುಳ್ಳು ಸುದ್ದಿಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿವೆ. ಈ ಹಿನ್ನೆಲೆಯಲ್ಲಿ, ತಪ್ಪಾದ ಮಾಹಿತಿ ಪ್ರಕಟಿಸಿದ ಸಂಸ್ಥೆಗಳು ಕೂಡಲೇ ಸ್ಪಷ್ಟೀಕರಣ ನೀಡಬೇಕು ಹಾಗೂ ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳದೆ ಇಂತಹ ಸುದ್ದಿಗಳನ್ನು ಪ್ರಕಟಿಸಬಾರದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಎಂ. ರಾಜಮ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

