Sat. Jun 6th, 2026

ವಿಧಾನಸೌಧದಲ್ಲಿ ಐಪಿಎಲ್ ಕ್ರೇಜ್: ಆರ್ ಸಿಬಿ – ಸಿಎಸ್ ಕೆ ಪಂದ್ಯದ ಉಚಿತ ಟಿಕೆಟ್‌ಗಾಗಿ ಶಾಸಕರ ಆಪ್ತರ ಕ್ಯೂ!

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಳೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹೈವೋಲ್ಟೇಜ್ ಐಪಿಎಲ್ ಪಂದ್ಯದ ಜ್ವರ ಈಗ ವಿಧಾನಸೌಧಕ್ಕೂ ತಟ್ಟಿದೆ. ಪಂದ್ಯದ ಉಚಿತ ಟಿಕೆಟ್‌ಗಳಿಗಾಗಿ ಶಾಸಕರ ಆಪ್ತ ಸಹಾಯಕರು (PA) ಸಾಲುಗಟ್ಟಿ ನಿಂತಿರುವ ದೃಶ್ಯ ಇಂದು ಕಂಡುಬಂದಿದೆ.

221 ಶಾಸಕರಿಗೆ ಉಚಿತ ಪಾಸ್:

ವಿಧಾನಸೌಧದ ಸ್ಪೀಕರ್ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಅವರ ಕೊಠಡಿಯಿಂದ ಈ ಟಿಕೆಟ್‌ಗಳನ್ನು ವಿತರಿಸಲಾಗುತ್ತಿದೆ. ವರದಿಗಳ ಪ್ರಕಾರ, ಮೂವರು ಬಿಜೆಪಿ ಶಾಸಕರನ್ನು ಹೊರತುಪಡಿಸಿ, ರಾಜ್ಯದ ಉಳಿದ 221 ಶಾಸಕರಿಗೆ ತಲಾ ಮೂರು ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಈ ಟಿಕೆಟ್‌ಗಳನ್ನು ಪಡೆಯಲು ಶಾಸಕರ ಆಪ್ತರು ಬೆಳಗ್ಗೆಯಿಂದಲೇ ಕಚೇರಿ ಮುಂದೆ ಜಮಾಯಿಸಿದ್ದರು.

ಸಾರ್ವಜನಿಕರ ಆಕ್ರೋಶ:

ಒಂದೆಡೆ ಸಾರ್ವಜನಿಕರು ದಿನಬಳಕೆಯ ವಸ್ತುಗಳಿಗಾಗಿ ಹಾಗೂ ಮೂಲಸೌಕರ್ಯಗಳಿಗಾಗಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇರುವಾಗ, ಜನಪ್ರತಿನಿಧಿಗಳು ಉಚಿತ ಕ್ರಿಕೆಟ್ ಟಿಕೆಟ್‌ಗಳಿಗಾಗಿ ಈ ರೀತಿ ಮುಗಿಬೀಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. “ಜನಸಾಮಾನ್ಯರು ಸಾವಿರಾರು ರೂಪಾಯಿ ನೀಡಿ ಟಿಕೆಟ್ ಖರೀದಿಸಲು ಪರದಾಡುತ್ತಿದ್ದರೆ, ಶಾಸಕರಿಗೆ ಈ ರೀತಿ ಉಚಿತವಾಗಿ ಹಂಚುತ್ತಿರುವುದು ಎಷ್ಟರ ಮಟ್ಟಿಗೆ ಸರಿ?” ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಈ ಪಂದ್ಯವು ಭಾರೀ ಕುತೂಹಲ ಕೆರಳಿಸಿದ್ದು, ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

 


Share this with Friends

Related Post