ಬೆಂಗಳೂರು: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸಿಇಟಿ (CET) ಫಲಿತಾಂಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸ್ಪಷ್ಟನೆ ನೀಡಿದೆ. ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳಲ್ಲಿ ಯಾವುದು ಹೆಚ್ಚಿದೆಯೋ, ಅದನ್ನೇ ರಾಂಕಿಂಗ್‌ಗೆ ಪರಿಗಣಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಎರಡನೇ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ಕಳೆದ ವರ್ಷದಂತೆಯೇ ಈ ಬಾರಿಯೂ ಉತ್ತಮ ಅಂಕಗಳನ್ನೇ ಗಣನೆಗೆ ತೆಗೆದುಕೊಳ್ಳಲಾಗುವುದು. ಎರಡೂ ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ನಂತರವೇ ಸಿಇಟಿ ರ್ಯಾಂಕ್ ಪಟ್ಟಿ ಬಿಡುಗಡೆ ಮಾಡಲಾಗುವುದು. ಹೀಗಾಗಿ ಅಭ್ಯರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು” ಎಂದಿದ್ದಾರೆ.
ರಾಜ್ಯ ಪಠ್ಯಕ್ರಮದವರಿಗೆ ಮಾತ್ರ ಅನ್ವಯ:
ಈ ನಿಯಮವು ಕೇವಲ ಕರ್ನಾಟಕ ರಾಜ್ಯ ಪಠ್ಯಕ್ರಮದ (State Syllabus) ಪಿಯುಸಿ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ. ಸಿಬಿಎಸ್‌ಇ (CBSE), ಐಸಿಎಸ್‌ಇ (ICSE) ಅಥವಾ ಇತರ ಹೊರರಾಜ್ಯದ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ ಎಂದು ಅವರು ವಿವರಿಸಿದ್ದಾರೆ

