ಬೆಂಗಳೂರು: “ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಶ್ರೇಷ್ಠ ಸಂವಿಧಾನದ ಶಕ್ತಿಯಿಂದಲೇ ಇಂದು ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಈ ಸ್ಥಾನದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕರಾಗಿ ನುಡಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ‘ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ’ ಹಾಗೂ ‘ಅಂಬೇಡ್ಕರ್ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಮಾತನಾಡಿದ ಅವರು, “ಸಮಾಜದಲ್ಲಿ ಜಾತೀಯತೆ ಮತ್ತು ಅಸ್ಪೃಶ್ಯತೆ ಹೋಗಲಾಡಿಸಬೇಕಾದರೆ ಮೊದಲು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ನೆಲೆಸಬೇಕು ಎಂಬುದು ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು. ಎಲ್ಲಿಯವರೆಗೆ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಜಾತಿ ವ್ಯವಸ್ಥೆ ಬೇರೂರಿರುತ್ತದೆ,” ಎಂದು ಅಭಿಪ್ರಾಯಪಟ್ಟರು.
ಸರ್ವಜನಾಂಗದ ನಾಯಕ:
ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದ ಅವರು, “ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕರಾಗಿರಲಿಲ್ಲ. ಅವರು ದಮನಿತರು, ಶೋಷಿತರು ಮತ್ತು ಅವಕಾಶ ವಂಚಿತ ಪ್ರತಿಯೊಬ್ಬ ಭಾರತೀಯನ ಪರವಾಗಿ ಹೋರಾಡಿದ ಮಹಾನ್ ಮಾನವತಾವಾದಿ. ಅವರು ನೀಡಿದ ಸಂವಿಧಾನವು ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಹಕ್ಕನ್ನು ಒದಗಿಸಿಕೊಟ್ಟಿದೆ,” ಎಂದು ಸ್ಮರಿಸಿದರು.
ಸಾಧಿಸಬೇಕಾದ ಗುರಿ ದೊಡ್ಡದಿದೆ:
ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ಅಂಬೇಡ್ಕರ್ ಅವರು ಕನಸು ಕಂಡಿದ್ದ ಸಂಪೂರ್ಣ ಸಮಾನತೆಯನ್ನು ಇಂದಿಗೂ ಸಾಧಿಸಲು ಸಾಧ್ಯವಾಗಿಲ್ಲದಿರುವುದು ನೋವಿನ ಸಂಗತಿ. ಸಮಾಜದ ಈ ಅಸಮಾನತೆಗಳನ್ನು ಮೆಟ್ಟಿ ನಿಲ್ಲದಿದ್ದರೆ ಸ್ವಾತಂತ್ರ್ಯಕ್ಕೆ ಪೂರ್ಣ ಅರ್ಥ ಬರುವುದಿಲ್ಲ ಎಂಬ ಅಂಬೇಡ್ಕರ್ ಅವರ ಎಚ್ಚರಿಕೆಯ ನುಡಿಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ವೈಜ್ಞಾನಿಕ ಶಿಕ್ಷಣ ಹಾಗೂ ಆರ್ಥಿಕ ಸಬಲೀಕರಣದಿಂದ ಮಾತ್ರ ಸಮಾನತೆ ಸಾಧ್ಯ:
“ಸಮಾಜದ ಎಲ್ಲ ಸಂಕೋಲೆಗಳಿಂದ ಮುಕ್ತಿ ಹೊಂದಲು ಶಿಕ್ಷಣವೊಂದೇ ಪ್ರಬಲ ಅಸ್ತ್ರ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಸಿಕ್ಕಾಗ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯ,””ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ವಿದ್ವಾಂಸರಾಗಿರಲಿಲ್ಲ, ಅವರು ಹಿಂದೂ ಧರ್ಮದ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ಸುಧಾರಕರು. ಅಸಮಾನತೆಗೆ ಕಾರಣವಾದ ಮನುವಾದವನ್ನು ಬಲವಾಗಿ ವಿರೋಧಿಸಿದ ಅವರು, ಧರ್ಮ ಸುಧಾರಣೆಯ ಪ್ರಯತ್ನಗಳು ಕೈಗೂಡದಿದ್ದಾಗ ಅನಿವಾರ್ಯವಾಗಿ ಧರ್ಮ ತ್ಯಜಿಸಬೇಕಾಯಿತು,” ಎಂದು ಅಂಬೇಡ್ಕರ್ ಅವರ ಹೋರಾಟದ ಹಾದಿಯನ್ನು ಸ್ಮರಿಸಿದರು.
ಶಿಕ್ಷಣವೇ ಶಕ್ತಿ:
ಅಂಬೇಡ್ಕರ್ ಅವರು ಅಂದು ಉನ್ನತ ಶಿಕ್ಷಣ ಪಡೆದು, ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದರಿಂದಲೇ ನಮಗೆ ಇಂತಹ ಶ್ರೇಷ್ಠ ಸಂವಿಧಾನ ಸಿಕ್ಕಿದೆ. “ಕೇವಲ ಪದವಿ ಪಡೆಯುವುದು ಶಿಕ್ಷಣವಲ್ಲ; ನೆಹರೂ, ಲೋಹಿಯಾ ಮತ್ತು ಅಂಬೇಡ್ಕರ್ ಅವರಂತೆ ವೈಜ್ಞಾನಿಕತೆ ಹಾಗೂ ಮಾನವೀಯತೆಯಿಂದ ಕೂಡಿದ ಶಿಕ್ಷಣವನ್ನು ಇಂದಿನ ಪೀಳಿಗೆ ಪಡೆಯಬೇಕು. ಸಾಮಾಜಿಕ ವ್ಯವಸ್ಥೆಯ ಆಳವಾದ ಅರಿವಿದ್ದ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರಿಗೆ ಸಮಾನತೆಯ ಸಂವಿಧಾನ ರಚಿಸಲು ಸಾಧ್ಯವಾಯಿತು,” ಎಂದು ಅವರು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಗುರಿ:
ಸಮ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳನ್ನು ಉಲ್ಲೇಖಿಸಿದ ಸಿಎಂ, “ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬುವುದು ನಮ್ಮ ಮೊದಲ ಆದ್ಯತೆ. ಪ್ರಸ್ತುತ ಜಾರಿಯಲ್ಲಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಸೌಲಭ್ಯಗಳಲ್ಲ, ಅವು ಶೋಷಿತ ಸಮುದಾಯಗಳಿಗೆ ಆರ್ಥಿಕ ಬಲ ನೀಡಿ ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನಗಳಾಗಿವೆ,” ಎಂದು ಬಣ್ಣಿಸಿದರು.
ಸಂವಿಧಾನ ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ:”ಮನುವಾದಿಗಳು ಸಂವಿಧಾನದ ವಿರೋಧಿಗಳಾಗಿದ್ದು, ಸುಳ್ಳು ಸುದ್ದಿಗಳ ಮೂಲಕ ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಅಪಪ್ರಚಾರಗಳನ್ನು ಸಾರ್ವಜನಿಕರು ನಂಬಬಾರದು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.”ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತು ಅಥವಾ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಅವಕಾಶ ನೀಡಲಿಲ್ಲ ಎಂಬಂತಹ ಸುಳ್ಳುಗಳನ್ನು ಸೃಷ್ಠಿಸಿ ಹರಡಲಾಗುತ್ತಿದೆ. ಅಂಬೇಡ್ಕರ್ ಅವರು ಇಲ್ಲದಿದ್ದರೆ ಈ ದೇಶದ ಭವಿಷ್ಯ ಏನಾಗುತ್ತಿತ್ತು ಎಂದು ಊಹಿಸುವುದು ಅಸಾಧ್ಯ. ಅವರು ಎಲ್ಲಾ ಕಾಲಕ್ಕೂ ಸಲ್ಲುವ ವಿಶ್ವಮಾನವ. ಅವರ ಬದುಕು ಮತ್ತು ಆಶಯಗಳನ್ನು ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಬೇಕು,” ಎಂದು ಸಿಎಂ ತಿಳಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಒತ್ತು:
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂದು ಉನ್ನತ ಶಿಕ್ಷಣ ಪಡೆದಿದ್ದರಿಂದಲೇ ಇಂತಹ ಶ್ರೇಷ್ಠ ಸಂವಿಧಾನ ನೀಡಲು ಸಾಧ್ಯವಾಯಿತು ಎಂದ ಅವರು, ರಾಜ್ಯ ಸರ್ಕಾರದ ವಸತಿ ಶಾಲೆಗಳ ಸಾಧನೆಯನ್ನು ಶ್ಲಾಘಿಸಿದರು. “ನಮ್ಮ ಸರ್ಕಾರದ ವಸತಿ ಶಾಲೆಗಳಲ್ಲಿ ಶೇ. 97.22ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಿಯುಸಿ ಪರೀಕ್ಷೆಯಲ್ಲೂ ನಮ್ಮ ಮಕ್ಕಳು ಅತಿ ಹೆಚ್ಚು ಅಂಕ ಗಳಿಸುತ್ತಿರುವುದು ಸರ್ಕಾರದ ಶೈಕ್ಷಣಿಕ ಕಾಳಜಿಗೆ ಸಾಕ್ಷಿಯಾಗಿದೆ,” ಎಂದರು.
ಧರ್ಮ ಸುಧಾರಣೆ ಮತ್ತು ಗ್ಯಾರಂಟಿ:
“ಅಂಬೇಡ್ಕರ್ ಅವರು ಹಿಂದೂ ಧರ್ಮದ ಸುಧಾರಣೆಗಾಗಿ ಸಾಕಷ್ಟು ಶ್ರಮಿಸಿದರು. ಆದರೆ ಅಸಮಾನತೆಗೆ ಕಾರಣವಾದ ಮನುವಾದವನ್ನು ತಿರಸ್ಕರಿಸಿದ ಅವರು, ಅಂತಿಮವಾಗಿ ಸಮಾನತೆಯ ಹಾದಿ ಹಿಡಿದರು. ಪ್ರಸ್ತುತ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ನೀಡುವ ಮೂಲಕ ಸಮ ಸಮಾಜ ನಿರ್ಮಾಣದತ್ತ ಹೆಜ್ಜೆ ಹಾಕುತ್ತಿವೆ,” ಎಂದು ಅವರು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ನೀಡಿ ಗೌರವಿಸಿದರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

