Sat. Jun 6th, 2026

ಜಿಬಿಎಯಿಂದ ಅಂತಿಮ ಮತದಾರರ ಪಟ್ಟಿ ಪ್ರಕಟ;ಬೆಂಗಳೂರಿನಲ್ಲಿದ್ದಾರೆ 88.95 ಲಕ್ಷ ಮತದಾರರು

Share this with Friends

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಶನಿವಾರ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯ ಪ್ರಕಾರ ಒಟ್ಟು 88,95,361 ಮತದಾರರು ನಗರದ 369 ವಾರ್ಡ್‌ಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

ಮತದಾರರ ಅಂಕಿ-ಅಂಶ:

ಬಿಡುಗಡೆಯಾಗಿರುವ ಅಂತಿಮ ಪಟ್ಟಿಯಲ್ಲಿ 45,71,169 ಪುರುಷರು, 43,22,557 ಮಹಿಳೆಯರು ಹಾಗೂ 1,635 ಇತರ ಮತದಾರರಿದ್ದಾರೆ. ಕರಡು ಪಟ್ಟಿಗೆ ಹೋಲಿಸಿದರೆ ಈ ಬಾರಿ ಹೊಸದಾಗಿ 2,833 ಮತದಾರರು ಸೇರ್ಪಡೆಗೊಂಡಿದ್ದಾರೆ. ಸುಗಮ ಮತದಾನಕ್ಕಾಗಿ ಒಟ್ಟು 8,023 ಮತಗಟ್ಟೆಗಳನ್ನು ಗುರುತಿಸಲಾಗಿದೆ.

ವಾರ್ಡ್‌ವಾರು ವಿವರ:

ದೊಡ್ಡ ವಾರ್ಡ್: ಬೆಂಗಳೂರು ದಕ್ಷಿಣದ ‘ಸುಭ್ರಮಣ್ಯಪುರ’ (ವಾರ್ಡ್ ಸಂಖ್ಯೆ 51) ಅತಿ ಹೆಚ್ಚು ಅಂದರೆ 53,660 ಮತದಾರರನ್ನು ಹೊಂದಿದೆ.

ಸಣ್ಣ ವಾರ್ಡ್: ಬೆಂಗಳೂರು ಪೂರ್ವದ ‘ವಿಜ್ಞಾನನಗರ’ (ವಾರ್ಡ್ ಸಂಖ್ಯೆ 24) ಅತಿ ಕಡಿಮೆ ಅಂದರೆ 12,897 ಮತದಾರರನ್ನು ಹೊಂದಿದೆ.

ಹೆಸರು ಪರಿಶೀಲನೆಗೆ ಅವಕಾಶ:

ಮತದಾರರು ತಮ್ಮ ಹೆಸರನ್ನು EPIC ಸಂಖ್ಯೆ ಅಥವಾ ಹೆಸರಿನ ಮೂಲಕ karnataka.gov.in ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ಅಂತಿಮ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ, ಪೂರಕ ಪಟ್ಟಿಯಲ್ಲಿ ಹೆಸರು ಸೇರಿಸಲು ಚುನಾವಣಾ ಆಯೋಗವು ಅವಕಾಶ ಕಲ್ಪಿಸಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಸಹಾಯವಾಣಿಗಳು:

ನಾಗರಿಕರ ಅನುಕೂಲಕ್ಕಾಗಿ ವಿವಿಧ ವಲಯಗಳಿಗೆ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ:

ಬೆಂಗಳೂರು ಕೇಂದ್ರ: 080-22975803

ಬೆಂಗಳೂರು ಉತ್ತರ: 080-22975936

ದಕ್ಷಿಣ: 9480685704, ಪೂರ್ವ: 9480685706, ಪಶ್ಚಿಮ: 9480685703.

 


Share this with Friends

Related Post