ಬೆಂಗಳೂರು: ಒಡಿಶಾದ ಭುವನೇಶ್ವರದಲ್ಲಿ ನಡೆದ 61ನೇ ಆವೃತ್ತಿಯ ‘ಫೆಮಿನಾ ಮಿಸ್ ಇಂಡಿಯಾ-2026’ ಸೌಂದರ್ಯ ಸ್ಪರ್ಧೆಯಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸತೀಶ್ ಸೈಲ್ ಭರ್ಜರಿ ಜಯ ಸಾಧಿಸಿದ್ದಾರೆ. ದೇಶದ ವಿವಿಧೆಡೆಯಿಂದ ಬಂದಿದ್ದ 29 ಸ್ಪರ್ಧಿಗಳನ್ನು ಹಿಂದಿಕ್ಕಿದ ಸಾಧ್ವಿ, ಈ ಬಾರಿಯ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಸಿಎಂ ಅಭಿನಂದನೆ:
ಸಾಧ್ವಿ ಅವರ ಈ ಐತಿಹಾಸಿಕ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಸತೀಶ್ ಸೈಲ್ ಅವರು ಮಗಳ ಸಾಧನೆಯನ್ನು ಹಂಚಿಕೊಂಡಾಗ ಬಹಳ ಸಂತೋಷವಾಯಿತು. ಮಗಳ ಕನಸುಗಳಿಗೆ ಬೆನ್ನೆಲುಬಾಗಿ ನಿಂತಿರುವ ಪೋಷಕರಿಗೂ ಅಭಿನಂದನೆಗಳು. 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಸಾಧ್ವಿ, ಅಲ್ಲಿಯೂ ಜಯಭೇರಿ ಬಾರಿಸಿ ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಲಿ” ಎಂದು ಹಾರೈಸಿದ್ದಾರೆ.
ಅರ್ಥಶಾಸ್ತ್ರಜ್ಞೆ ಹಾಗೂ ಉದ್ಯಮಿ:
ಸಾಧ್ವಿ ಕೇವಲ ಸೌಂದರ್ಯವತಿಯಷ್ಟೇ ಅಲ್ಲ, ಅಪಾರ ಬುದ್ಧಿವಂತೆಯೂ ಹೌದು. ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಪಡೆದಿದ್ದಾರೆ. 7 ಭಾಷೆಗಳನ್ನು ಬಲ್ಲ ಇವರು, ಸದ್ಯ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕ್ರೀಡೆ, ಫೋಟೋಗ್ರಫಿ ಹಾಗೂ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಸಾಧ್ವಿ, ಇದೀಗ ವಿಶ್ವ ಸುಂದರಿ ಸ್ಪರ್ಧೆಯ ಮೇಲೆ ಕಣ್ಣಿಟ್ಟಿದ್ದಾರೆ.
ವಿಜೇತೆ: ಸಾಧ್ವಿ ಸತೀಶ್ ಸೈಲ್ (ಕಾರವಾರ ಮೂಲದವರು)
ಪ್ರತಿನಿಧಿಸಿದ ರಾಜ್ಯ: ಗೋವಾ
ಮುಂದಿನ ಸ್ಪರ್ಧೆ: ಮಿಸ್ ವರ್ಲ್ಡ್ 2027 (ಭಾರತದ ಪ್ರತಿನಿಧಿ)

