Sat. Jun 6th, 2026

ಕಾಂಗ್ರೆಸ್‌ಗೆ ಅಹಿಂದ ಸಮಾವೇಶ ಮಾಡುವ ನೈತಿಕತೆ ಇಲ್ಲ: ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

Share this with Friends

ಚಿತ್ರದುರ್ಗ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ಮತ್ತು ಅವರಿಗೆ ಮಾಡಿದ ಅಪಮಾನವನ್ನು ಜನ ನೋಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಯಾವ ಮುಖ ಇಟ್ಟುಕೊಂಡು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡುತ್ತದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಚಿತ್ರದುರ್ಗದಲ್ಲಿ ಶಾಸಕ ಚಂದ್ರಪ್ಪ ಅವರ ಪುತ್ರನ ಮದುವೆ ಸಮಾರಂಭದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದರು.ಅಧಿಕಾರಕ್ಕಾಗಿ ಅಹಿಂದ ಬಳಕೆ: ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಅಹಿಂದ ಸಮಾವೇಶದ ನಾಟಕವಾಡುತ್ತಿದೆ. ಅಹಿಂದ ವರ್ಗದ ಜನರೇ “ನಮ್ಮ ಭಿಕ್ಷೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ” ಎಂದು ಹೇಳುತ್ತಿದ್ದಾರೆ.

ಅಹಿಂದ ವರ್ಗಕ್ಕೆ ಅಪಮಾನ: ದಾವಣಗೆರೆಯಲ್ಲಿ ಅಹಿಂದ ವರ್ಗವನ್ನು ಕಾಂಗ್ರೆಸ್ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸತತವಾಗಿ ವರದಿಯಾಗುತ್ತಿದ್ದರೂ, ಹಣ ಖರ್ಚು ಮಾಡಿ ಜನ ಸೇರಿಸಿ ಸಮಾವೇಶ ಮಾಡಲು ಹೊರಟಿದ್ದಾರೆ.

ಚುನಾವಣೆಯಿಂದ ಪಲಾಯನ: ಜಿಬಿಎ (ಗ್ರಾಮ ಪಂಚಾಯತ್) ಚುನಾವಣೆ ನಡೆಸಲು ಹಣವಿಲ್ಲ, ಸಿಬ್ಬಂದಿಯಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಪಲಾಯನವಾದಕ್ಕೆ ಸಾಕ್ಷಿ.

ಬಿಎಸ್‌ವೈ ಕಾರ್ಯಕ್ರಮಕ್ಕೆ ಶುಭ ಹಾರೈಕೆ: ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಸಚಿವರು ಶುಭ ಕೋರಿದರು.

ಸಚಿವ ಡಿ. ಸುಧಾಕರ್ ಆರೋಗ್ಯದ ಬಗ್ಗೆ ನಿಗೂಢತೆ ಯಾಕೆ?: 

ರಾಜ್ಯದ ಸಚಿವ ಡಿ. ಸುಧಾಕರ್ ಅವರ ಆರೋಗ್ಯದ ಕುರಿತು ಸರ್ಕಾರ ಜನತೆಗೆ ಪಾರದರ್ಶಕ ಮಾಹಿತಿ ನೀಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಸುಧಾಕರ್ ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿಯ ಬಗ್ಗೆ ಹಲವು ಅನುಮಾನಗಳು ಮೂಡುತ್ತಿವೆ. ಸಚಿವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಒಳಗೆ ಏನು ನಡೆಯುತ್ತಿದೆ? ಅವರ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಸರ್ಕಾರ ಯಾಕೆ ಮುಚ್ಚಿಡುತ್ತಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ದುರ್ಬಳಕೆಯ ಸಂಶಯ: ಸಚಿವರ ಪ್ರಜ್ಞಾಹೀನ ಸ್ಥಿತಿಯನ್ನು ಬಳಸಿಕೊಂಡು ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳುವಂತಹ ಕೆಲಸಗಳು ನಡೆಯುತ್ತಿವೆಯೇ ಎಂಬ ಅನುಮಾನ ಕಾಡುತ್ತಿದೆ. ಇಂತಹ ಗಂಭೀರ ಸಮಯದಲ್ಲಿ ಕೆಲವರು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ ಪರಿಣಿತರಾಗಿದ್ದಾರೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಸರ್ಕಾರದ ಜವಾಬ್ದಾರಿ: ಸಾರ್ವಜನಿಕ ಜೀವನದಲ್ಲಿರುವ ಸಚಿವರ ಆರೋಗ್ಯದ ಬಗ್ಗೆ ನಿಖರವಾದ ಮಾಹಿತಿಯನ್ನು ರಾಜ್ಯದ ಜನತೆಗೆ ತಿಳಿಸುವ ಕನಿಷ್ಠ ಜವಾಬ್ದಾರಿಯನ್ನು ಸರ್ಕಾರ ನಿಭಾಯಿಸಬೇಕು ಎಂದು ಅವರು ಒತ್ತಾಯಿಸಿದರು.

 


Share this with Friends

Related Post