ಮಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರು ತುಳುನಾಡಿನ ಪರಮ ಪೂಜನೀಯ ಹಾಗೂ ಕಾರಣಿಕ ದೈವ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿ ನಡೆದ ದೈವಾರಾಧನೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದಾರೆ.
ಕುಟುಂಬದೊಂದಿಗೆ ಭಾಗಿ, ಭಕ್ತಿಭಾವದ ಸೇವೆ:

ನಟಿ ರಚಿತಾ ರಾಮ್ ಹಾಗೂ ಅವರ ಕುಟುಂಬಸ್ಥರಿಗೆ ಕೊರಗಜ್ಜ ದೈವದ ಮೇಲೆ ಅಪಾರ ನಂಬಿಕೆಯಿದ್ದು, ತಮ್ಮ ಇಷ್ಟಾರ್ಥಗಳು ಸಫಲವಾದ ಹಿನ್ನೆಲೆಯಲ್ಲಿ ಈ ಹರಕೆ ಕೋಲ ಸೇವೆಯನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ತಡರಾತ್ರಿ ನಡೆದ ಈ ಕೋಲ ಸೇವೆಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಿಯಾಗಿದ್ದ ನಟಿ, ದೈವದ ಎದುರು ಕೈಮುಗಿದು ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಸದ್ಯ ದೈವದ ಸನ್ನಿಧಿಯಲ್ಲಿ ರಚಿತಾ ರಾಮ್ ಅವರು ಆಶೀರ್ವಾದ ಪಡೆಯುತ್ತಿರುವ ಫೋಟೋಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಚಿತ್ರರಂಗದಲ್ಲಿ ಯಶಸ್ವಿ ಪಯಣ
ಕಿರುತೆರೆಯ ‘ಅರಸಿ’ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಚಿತಾ ರಾಮ್, ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಬುಲ್ ಬುಲ್’ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೆ ಸ್ಯಾಂಡಲ್‌ವುಡ್‌ನ ಪ್ರಮುಖ ಸಾಲಿನ ನಟಿಯಾಗಿ ಗುರುತಿಸಿಕೊಂಡಿರುವ ಅವರು, ಅನೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಬದುಕಿನ ಯಶಸ್ಸಿಗಾಗಿ ಅವರು ಈ ದೈವದ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ

