Sat. Jun 6th, 2026

ದೇಶದ ಆರ್ಥಿಕ ಪ್ರಗತಿ, ರಾಜ್ಯದಲ್ಲಿ ಉತ್ತಮ ಮಳೆಗಾಗಿ ತಿಮ್ಮಪ್ಪನಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿಶೇಷ ಪ್ರಾರ್ಥನೆ!

Share this with Friends

ತಿರುಮಲ: “ದೇಶವು ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿಗೆ ಸಿಲುಕದೆ ಸಮೃದ್ಧವಾಗಿರಲಿ, ಜನರಿಗೆ ಉತ್ತಮ ಆರೋಗ್ಯ ಸಿಗಲಿ ಹಾಗೂ ಕರ್ನಾಟಕದಲ್ಲಿ ಈ ಬಾರಿ ಅತ್ಯುತ್ತಮ ಮಳೆಯಾಗಲಿ ಎಂದು ಏಳುಕೊಂಡಲವಾಡ ವೆಂಕಟೇಶ್ವರ ಸ್ವಾಮಿಯ ಬಳಿ ಪ್ರಾರ್ಥಿಸಿದ್ದೇನೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಭೇಟಿಯ ಉದ್ದೇಶ ಹಾಗೂ ತಿರುಮಲದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

6-7 ವರ್ಷಗಳ ನಂತರ ತಿರುಪತಿ ಪ್ರವಾಸ!

“ಇಡೀ ದೇಶದಲ್ಲಿ ಶಾಂತಿ ನೆಲೆಸಬೇಕು ಮತ್ತು ಎದುರಾಗುವ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ದೇಶಕ್ಕೆ ಸಿಗಬೇಕು ಎಂದು ದೇವರಲ್ಲಿ ಕೋರಿದ್ದೇನೆ. ಬಹಳ ದಿನಗಳ ನಂತರ, ಅಂದರೆ ಸುಮಾರು ಆರೇಳು ವರ್ಷಗಳ ಬಳಿಕ ನಾನು ತಿರುಮಲಕ್ಕೆ ಭೇಟಿ ನೀಡುತ್ತಿದ್ದೇನೆ. ಈ ಸುದಿನದಂದು ಶ್ರೀವಾರಿ ದರ್ಶನ ಪಡೆದಿರುವುದು ನನಗೆ ಅಪಾರ ಸಂತೋಷ ತಂದಿದೆ” ಎಂದು ಡಿ ಕೆ ಶಿವಕುಮಾರ್ ಭಾವುಕರಾಗಿ ನುಡಿದರು.

ಟಿಟಿಡಿ ಆಡಳಿತ ವೈಖರಿಗೆ ಡಿಸಿಎಂ ಶ್ಲಾಘನೆ

ತಿರುಮಲ ತಿರುಪತಿ ದೇವಸ್ಥಾನಮ್ಸ್ (TTD) ಮಂಡಳಿಯ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಡಿಸಿಎಂ, “ಕಳೆದ ಕೆಲವು ವರ್ಷಗಳಲ್ಲಿ ತಿರುಮಲದಲ್ಲಿ ಅದ್ಭುತವಾದ ಬದಲಾವಣೆಗಳು ಮತ್ತು ಅಭಿವೃದ್ಧಿ ಕಾರ್ಯಗಳಾಗಿವೆ. ಇಲ್ಲಿನ ಶಿಸ್ತು, ಅತ್ಯುತ್ತಮ ಸ್ವಚ್ಛತೆ ಮತ್ತು ವ್ಯವಸ್ಥಿತ ಆಡಳಿತ ನಿಜಕ್ಕೂ ಶ್ಲಾಘನೀಯ. ಟಿಟಿಡಿ ಅಧ್ಯಕ್ಷರು ಹಾಗೂ ಅವರ ಇಡೀ ತಂಡ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ” ಎಂದರು. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶದ ಕಂದಾಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾಗಿ ತಿಳಿಸಿದ ಅವರು, ಅಲ್ಲಿನ ಸರ್ಕಾರದ ಜನಪರ ಕೆಲಸಗಳಿಗೆ ಶುಭ ಹಾರೈಸಿದರು.

 


Share this with Friends

Related Post