ಮಡಿಕೇರಿ: ಸಾಕಾನೆಗಳ ಭೀಕರ ಕಾದಾಟಕ್ಕೆ ಪ್ರವಾಸಿ ಮಹಿಳೆ ದಾರುಣವಾಗಿ ಬಲಿಯಾದ ಘಟನೆಯ ಬೆನ್ನಲ್ಲೇ, ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರವನ್ನು (Dubare Elephant Camp) ಮುಂದಿನ ಎರಡು ದಿನಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಲು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರಿಗೆ ನಿರ್ಬಂಧ!
ಶಿಬಿರದಲ್ಲಿ ಮಾರ್ತಾಂಡ ಮತ್ತು ಕಂಜನ್ ಆನೆಗಳ ನಡುವೆ ನಡೆದ ಗಲಾಟೆಯಿಂದಾಗಿ ಪ್ರವಾಸಿಗರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಆವರಣದ ಸುರಕ್ಷತೆಯನ್ನು ಮರುಪರಿಶೀಲಿಸಲು ಹಾಗೂ ಆನೆಗಳನ್ನು ಶಾಂತಗೊಳಿಸಲು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಎರಡು ದಿನಗಳ ಕಾಲ ಯಾವುದೇ ಪ್ರವಾಸಿಗರಿಗೆ ಶಿಬಿರದ ಒಳಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸ್ಥಳದಲ್ಲೇ ಮೊಕ್ಕಾಂ ಹೂಡಿದ ಹಿರಿಯ ಅಧಿಕಾರಿಗಳು
ದುರಂತ ಸಂಭವಿಸಿದ ನದಿಯ ತೀರ ಹಾಗೂ ಶಿಬಿರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗುವಿನ ವಾತಾವರಣವಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಆನೆಗಳಿಗೆ ಸದ್ಯ ಮಾವುತರ ಕಟ್ಟುನಿಟ್ಟಿನ ಕಾವಲು ನೀಡಲಾಗಿದ್ದು, ಶಿಬಿರದ ಇತರ ಆನೆಗಳ ವರ್ತನೆಗಳ ಮೇಲೂ ತೀವ್ರ ನಿಗಾ ಇಡಲಾಗಿದೆ. ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು (SOP) ಸಿದ್ಧಪಡಿಸಿದ ಬಳಿಕವಷ್ಟೇ ಶಿಬಿರವನ್ನು ಸಾರ್ವಜನಿಕರ ಭೇಟಿಗೆ ಮುಕ್ತಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

