Fri. Jun 5th, 2026

ದೇಶಾದ್ಯಂತ ಔಷಧ ಮಳಿಗೆಗಳ ಬಂದ್‌ಗೆ ಕರೆ: ರಾಜ್ಯದ 26 ಸಾವಿರ ಮೆಡಿಕಲ್ ಶಾಪ್‌ಗಳು ಸ್ತಬ್ಧ!

Share this with Friends

ಬೆಂಗಳೂರು: ಆನ್‌ಲೈನ್ ಮೂಲಕ ಅವೈಜ್ಞಾನಿಕವಾಗಿ ನಡೆಯುತ್ತಿರುವ ಇ-ಫಾರ್ಮಸಿ (e-pharmacy) ಔಷಧ ಮಾರಾಟ ಮತ್ತು ಕಾರ್ಪೊರೇಟ್ ಕಂಪನಿಗಳ ಅನಾರೋಗ್ಯಕರ ರಿಯಾಯಿತಿ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಔಷಧ ಮಳಿಗೆಗಳ (Medical Shops) ಮಹಾ ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಸುಮಾರು 26 ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಬಂದ್ ಆಗಲಿದ್ದು, ಜನಸಾಮಾನ್ಯರಿಗೆ ಔಷಧದ ಕೊರತೆ ಎದುರಾಗುವ ಆತಂಕ ಎದುರಾಗಿದೆ.

ಅಖಿಲ ಭಾರತ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಸಂಸ್ಥೆ (AIOCD) ನೇತೃತ್ವದಲ್ಲಿ ಈ ದೇಶವ್ಯಾಪಿ ಮುಷ್ಕರ ನಡೆಯುತ್ತಿದ್ದು, ದೇಶದಾದ್ಯಂತ ಸುಮಾರು 12 ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಿಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಪ್ರತಿಭಟನೆಗೆ ಮುಖ್ಯ ಕಾರಣಗಳೇನು?

ಔಷಧ ವ್ಯಾಪಾರಿಗಳ ಸಂಘಟನೆಯ ಪ್ರಕಾರ, ನಿಯಮಾವಳಿಗಳನ್ನು ಗಾಳಿಗೆ ತೂರಿ ಆನ್‌ಲೈನ್‌ನಲ್ಲಿ ಪ್ರಿಸ್ಕ್ರಿಪ್ಷನ್ ಪರಿಶೀಲಿಸದೆ ರಾಜಾರೋಷವಾಗಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ಯುವ ಪೀಳಿಗೆ ದುರುಪಯೋಗಪಡಿಸಿಕೊಳ್ಳಲು ಕಾರಣವಾಗುತ್ತಿದೆ. ಅಷ್ಟೇ ಅಲ್ಲದೆ, ಪ್ರಮುಖ ಕಾರ್ಪೊರೇಟ್ ಕಂಪನಿಗಳು ಭಾರಿ ರಿಯಾಯಿತಿಗಳನ್ನು ನೀಡಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿರುವುದರಿಂದ, ದಶಕಗಳಿಂದ ನಂಬಿಕಸ್ಥ ಸೇವೆ ನೀಡುತ್ತಾ ಬಂದಿರುವ ಸ್ಥಳೀಯ ಸಣ್ಣ ವ್ಯಾಪಾರಿಗಳು ತೀವ್ರ ಆರ್ಥಿಕ ನಷ್ಟ ಅನುಭವಿಸಿ ಬೀದಿಗೆ ಬೀಳುವಂತಾಗಿದೆ. ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಗಳ ಚಲಾವಣೆ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಸಾರ್ವಜನಿಕರೇ ಗಮನಿಸಿ: ತುರ್ತು ಔಷಧ ಇಂದೇ ಖರೀದಿಸಿ

ಈ 24 ಗಂಟೆಗಳ ಕಾಲದ ಸಾಂಕೇತಿಕ ಬಂದ್‌ನಿಂದಾಗಿ ಸಾಮಾನ್ಯ ಮೆಡಿಕಲ್ ಶಾಪ್‌ಗಳು ಸಂಪೂರ್ಣವಾಗಿ ಮುಚ್ಚಿರುತ್ತವೆ. ಕೇವಲ ತುರ್ತು ಚಿಕಿತ್ಸಾ ವಿಭಾಗಗಳು ಮತ್ತು ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಔಷಧಾಲಯಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಹೀಗಾಗಿ ಬಿಪಿ, ಮಧುಮೇಹ (ಶುಗರ್), ಹೃದಯಸಂಬಂಧಿ ಕಾಯಿಲೆಗಳು ಸೇರಿದಂತೆ ದೀರ್ಘಕಾಲದ ಕಾಯಿಲೆಗಳಿಗೆ ನಿಯಮಿತವಾಗಿ ಔಷಧ ಸೇವಿಸುವ ನಾಗರಿಕರು ಮುಂಜಾಗ್ರತಾ ಕ್ರಮವಾಗಿ ಇಂದೇ ತಮಗೆ ಅಗತ್ಯವಿರುವ ಔಷಧಿಗಳನ್ನು ಖರೀದಿಸಿಟ್ಟುಕೊಳ್ಳಲು ಔಷಧ ವ್ಯಾಪಾರಿಗಳ ಸಂಘ ಮನವಿ ಮಾಡಿದೆ.

 


Share this with Friends

Related Post