ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಾದ ಕಸ್ತೂರಿರಂಗನ್ ವರದಿಯ ಜಾರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಮುಂದೆ ಕರ್ನಾಟಕದ ಸ್ಪಷ್ಟ ಹಾಗೂ ಬಲವಾದ ನಿಲುವನ್ನು ಮಂಡಿಸಲು ದೇಶದ ಹಿರಿಯ ವಕೀಲರನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಇತ್ತೀಚಿನ ಆದೇಶದ ಕುರಿತು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಯವರು ಈ ಮಹತ್ವದ ಉತ್ತರ ನೀಡಿದರು
ಹಸಿರು ನ್ಯಾಯಮಂಡಳಿ ಆದೇಶದ ವಿವರ:
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಧಿಸೂಚನೆ ಹೊರಡಿಸಿದ ನಂತರ ಆ ವಿವರವನ್ನು ತನ್ನ ಗಮನಕ್ಕೆ ತರುವಂತೆ ತಿಳಿಸಿದೆ. ಆದರೆ, ಈ ಆದೇಶದಲ್ಲಿ ಮಂಡಳಿಯು ಪಶ್ಚಿಮ ಘಟ್ಟ ಪ್ರದೇಶವನ್ನು ಹಂಚಿಕೊಂಡಿರುವ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಆಕ್ಷೇಪಗಳ ಬಗ್ಗೆ ಯಾವುದೇ ಪ್ರತ್ಯೇಕ ಪ್ರಸ್ತಾಪ ಮಾಡಿಲ್ಲ ಎಂದು ಸಿಎಂ ಸದನದ ಗಮನಕ್ಕೆ ತಂದರು.
ಶಿಫಾರಸುಗಳಿಗೆ ಅಗೌರವವಿಲ್ಲ, ವೈಜ್ಞಾನಿಕ ಪರಿಷ್ಕರಣೆಗೆ ಪಟ್ಟು:
“ಕಸ್ತೂರಿರಂಗನ್ ಸಮಿತಿಯು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ (ESA) ರಕ್ಷಣೆಗಾಗಿ ನೀಡಿರುವ ಶಿಫಾರಸುಗಳನ್ನು ರಾಜ್ಯ ಸರ್ಕಾರವೇನೂ ಅಗೌರವಿಸುತ್ತಿಲ್ಲ. ಬದಲಾಗಿ, ತಲೆತಲೆಮಾರಿನಿಂದ ಅಲ್ಲಿಯೇ ಬದುಕುತ್ತಿರುವ ನಮ್ಮ ರಾಜ್ಯದ ಜನರ ಹಿತದೃಷ್ಟಿಯನ್ನು ಇಟ್ಟುಕೊಂಡು, ಆ ವರದಿಯನ್ನು ವೈಜ್ಞಾನಿಕ ಹಾದಿಯಲ್ಲಿ ಪರಿಷ್ಕರಿಸಿ ಎಂದು ನಾವು ಕೇಂದ್ರಕ್ಕೆ ಮನವಿ ಮಾಡುತ್ತಿದ್ದೇವೆ” ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಉಪಗ್ರಹ ಅಥವಾ ಡ್ರೋನ್ ಮೂಲಕ ಸಮೀಕ್ಷೆ ನಡೆಸಿದರೆ ಕೃಷಿ ಭೂಮಿ ಹಾಗೂ ಅರಣ್ಯ ಎರಡೂ ಹಸಿರಾಗಿಯೇ ಕಾಣುತ್ತದೆ ಎಂಬ ಅಂಶ ಸದನದ ಚರ್ಚೆಯಲ್ಲಿ ಪ್ರತಿಧ್ವನಿಸಿದೆ. ಹೀಗಾಗಿ, ಈ ಗೊಂದಲ ನಿವಾರಿಸಲು ಕಂದಾಯ (ರೆವಿನ್ಯೂ) ಇಲಾಖೆಯ ಮೂಲಕವೇ ತಳಮಟ್ಟದ ಜಂಟಿ ಭೌತಿಕ ಸಮೀಕ್ಷೆ ಮಾಡಿಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.

