Sat. Jun 6th, 2026

ಮೇ 23ಕ್ಕೆ ಡಿಸಿಇಟಿ, ಎಂ.ಟೆಕ್ ಪ್ರವೇಶ ಪರೀಕ್ಷೆ: 37 ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಕೆಇಎ ಅರ್ಜಿ ಆಹ್ವಾನ

Share this with Friends

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ನೇರ ದ್ವಿತೀಯ ವರ್ಷದ (ಲ್ಯಾಟರಲ್ ಎಂಟ್ರಿ) ಪ್ರವೇಶಕ್ಕಾಗಿ ನಡೆಸಲಾಗುವ ಡಿಸಿಇಟಿ (DCET) ಹಾಗೂ ಎಂ.ಟೆಕ್/ಎಂಇ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳು ಮೇ 23ರಂದು ನಡೆಯಲಿವೆ. ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಈ ಎರಡೂ ಪರೀಕ್ಷೆಗಳು ರಾಜ್ಯದ ಬೆಂಗಳೂರು, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ, ಧಾರವಾಡ, ಕಲ್ಬುರ್ಗಿ, ಮೈಸೂರು ಮತ್ತು ತುಮಕೂರು ಸೇರಿದಂತೆ ವಿವಿಧ ನಿಗದಿಪಡಿತ ಕೇಂದ್ರಗಳಲ್ಲಿ ನಡೆಯಲಿವೆ.

34 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ

ಡಿಸಿಇಟಿ ಪರೀಕ್ಷೆಯನ್ನು ಒಟ್ಟು 51 ಕೇಂದ್ರಗಳಲ್ಲಿ 21,095 ಅಭ್ಯರ್ಥಿಗಳು ಹಾಗೂ ಎಂ.ಟೆಕ್ ಪರೀಕ್ಷೆಯನ್ನು 26 ಕೇಂದ್ರಗಳಲ್ಲಿ 12,116 ಅಭ್ಯರ್ಥಿಗಳು ಬರೆಯುತ್ತಿದ್ದಾರೆ. ಒಟ್ಟಾರೆ 34,211 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಯಾವುದೇ ಅಕ್ರಮ ನಡೆಯದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ದಿನ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯೂ ಬೆಂಗಳೂರಿನಲ್ಲಿ ನಡೆಯಲಿದೆ.

ಕೆಇಎ ಮುಖ್ಯಾಂಶ: 37 ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯದ ಪ್ರಮುಖ ಮೂರು ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ಒಟ್ಟು 37 ಎಂಜಿನಿಯರ್ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು ಜೂನ್ 4 ಕೊನೆಯ ದಿನವಾಗಿದೆ.

ಯಾವೆಲ್ಲಾ ಇಲಾಖೆಗಳಲ್ಲಿ ನೇಮಕಾತಿ?

ಕೃಷಿ ಮಾರಾಟ ಮಂಡಳಿ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (KSSIDC)

ಬೆಂಗಳೂರು ಜಲಮಂಡಳಿ (BWSSB)

ಹಳೇ ಅಭ್ಯರ್ಥಿಗಳಿಗೆ ಮರು ಅರ್ಜಿ ಅಗತ್ಯವಿಲ್ಲ

ಪರಿಶಿಷ್ಟ ಜಾತಿಯ (SC) ಒಳ ಮೀಸಲಾತಿ ನಿಗದಿಯ ಕಾರಣದಿಂದಾಗಿ ಈ ಹಿಂದೆ ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆಗೆ, ಸರ್ಕಾರದ ಸೂಚನೆಯಂತೆ ಒಳ ಮೀಸಲಾತಿ ಅಳವಡಿಸಿಕೊಂಡು ಇದೀಗ ಮರು ಅಧಿಸೂಚನೆ ಹೊರಡಿಸಲಾಗಿದೆ.

ಎಡಿಟ್ ಮಾಡಲು ಅವಕಾಶ: ಈ ಹಿಂದೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದರೆ, ಪರಿಶಿಷ್ಟ ಜಾತಿಯ ಎ, ಬಿ ಮತ್ತು ಸಿ ವರ್ಗಗಳ ಆರ್ ಡಿ (RD) ಸಂಖ್ಯೆ ದಾಖಲಿಸದವರು, ತಮ್ಮ ಹಳೆಯ ಅರ್ಜಿಯಲ್ಲೇ ಎಡಿಟ್ ಮಾಡಿ ವಿವರಗಳನ್ನು ಅಪ್‌ಡೇಟ್ ಮಾಡಬಹುದು.

ಹೊಸಬರಿಗೂ ಅವಕಾಶ: ಈ ಮೊದಲು ಅರ್ಜಿ ಸಲ್ಲಿಸಲು ಸಾಧ್ಯವಾಗದ ಹೊಸ ಅಭ್ಯರ್ಥಿಗಳು ಕೂಡ ಜೂನ್ 4ರೊಳಗೆ ಆನ್‌ಲೈನ್ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ

 


Share this with Friends

Related Post