ಕಾಲಮಸ್ಸೇರಿ (ಕೇರಳ): ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಕೇರಳದ ಕಾಲಮಸ್ಸೇರಿಯಲ್ಲಿರುವ ಹೆಚ್‌ಎಂಟಿ (HMT) ಮಷಿನ್ ಮತ್ತು ಟೂಲ್ಸ್ ಲಿಮಿಟೆಡ್ ಕಾರ್ಖಾನೆಗೆ ಭೇಟಿ ನೀಡಿ ವಿಸ್ತೃತ ಪರಿಶೀಲನೆ ನಡೆಸಿದರು. ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಘಟಕಕ್ಕೆ ಅವರು ನೀಡುತ್ತಿರುವ ಎರಡನೇ ಭೇಟಿ ಇದಾಗಿದ್ದು, ಇಡೀ ಹೆಚ್‌ಎಂಟಿ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಪುನಶ್ಚೇತನಗೊಳಿಸುವ ಬೃಹತ್ ಕಾರ್ಯತಂತ್ರದ ಭಾಗವಾಗಿ ಈ ಭೇಟಿ ಮಹತ್ವ ಪಡೆದಿದೆ.
ದಕ್ಷಿಣ ಆಫ್ರಿಕಾಕ್ಕೆ ರಫ್ತಾಗಲಿರುವ ಯಂತ್ರಗಳ ವೀಕ್ಷಣೆ
ಕಾರ್ಖಾನೆಯ ವಿವಿಧ ಉತ್ಪಾದನಾ ವಿಭಾಗಗಳನ್ನು ವೀಕ್ಷಿಸಿದ ಸಚಿವರು, ವಿದೇಶಿ ರಫ್ತಿಗಾಗಿ ಸಿದ್ಧವಾಗಿದ್ದ ಅತ್ಯಾಧುನಿಕ ತಂತ್ರಜ್ಞಾನದ ಎನ್‌ಹೆಚ್ (NH) ಸರಣಿಯ ಯಂತ್ರೋಪಕರಣಗಳ ಕಾರ್ಯಾಚರಣೆಗೆ ಚಾಲನೆ ನೀಡಿದರು. ಕಾಲಮಸ್ಸೇರಿ ಘಟಕದಲ್ಲಿ ತಯಾರಾಗಿರುವ ಈ ನಿಖರ ಎಂಜಿನಿಯರಿಂಗ್ ಯಂತ್ರಗಳು ದಕ್ಷಿಣ ಆಫ್ರಿಕಾಕ್ಕೆ ರಫ್ತಾಗುತ್ತಿವೆ. ಇದು ಭಾರತದ ದೇಶೀಯ ಉತ್ಪಾದನಾ ಸಾಮರ್ಥ್ಯದ ಮೇಲೆ ಜಾಗತಿಕ ಮಾರುಕಟ್ಟೆಯಲ್ಲಿ ಮೂಡುತ್ತಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಸಚಿವರು ಶ್ಲಾಘಿಸಿದರು. ಹೆಚ್‌ಎಂಟಿ ಸಂಸ್ಥೆಗೆ ಅಂತರರಾಷ್ಟ್ರೀಯ ಮಟ್ಟದಿಂದ ನಿರಂತರವಾಗಿ ರಫ್ತು ಬೇಡಿಕೆಗಳು ಬರುತ್ತಿವೆ ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಕಾರ್ಮಿಕ ಸಂಘಟನೆಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ
ದೆಹಲಿಯಿಂದ ನೇರವಾಗಿ ಕೊಚ್ಚಿಗೆ ಆಗಮಿಸಿ ಅಲ್ಲಿಂದ ಕಾರ್ಖಾನೆಗೆ ತಲುಪಿದ ಸಚಿವರ ಜೊತೆ ಹೆಚ್‌ಎಂಟಿ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಕೇಂದ್ರ ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಭೇಟಿಯ ಅವಧಿಯಲ್ಲಿ ಕುಮಾರಸ್ವಾಮಿ ಅವರು ಹೆಚ್‌ಎಂಟಿ, ಎಫ್‌ಸಿಆರ್‌ಐ ಮತ್ತು ಇನ್ಸ್ಟ್ರುಮೆಂಟೇಶನ್ ಲಿಮಿಟೆಡ್ (IL) ಸಂಸ್ಥೆಗಳ ಉನ್ನತಾಧಿಕಾರಿಗಳೊಂದಿಗೆ ಪ್ರತ್ಯೇಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಇದರೊಂದಿಗೆ ಕಾರ್ಖಾನೆಯ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಉದ್ಯೋಗಿಗಳನ್ನು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿ ಮಹತ್ವದ ಸಂವಾದ ನಡೆಸಿದರು.
ಹೆಚ್‌ಎಂಟಿ ಯಂತ್ರಗಳ ರಫ್ತು ಭಾರತೀಯ ಉತ್ಪಾದನಾ ವಲಯಕ್ಕೆ ಹೆಮ್ಮೆಯ ಕ್ಷಣ:
ಕೇರಳದ ಹೆಚ್‌ಎಂಟಿ (HMT) ಘಟಕದಲ್ಲಿ ತಯಾರಾದ ಸ್ಥಳೀಯ ಯಂತ್ರೋಪಕರಣಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿರುವುದು ಭಾರತದ ಉತ್ಪಾದನಾ ವಲಯಕ್ಕೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇದು ಭಾರತೀಯ ಎಂಜಿನಿಯರಿಂಗ್‌ನ ಶ್ರೇಷ್ಠತೆ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಸಿಕ್ಕ ಜಾಗತಿಕ ಮನ್ನಣೆಯಾಗಿದೆ ಎಂದು ಅವರು ಶ್ಲಾಘಿಸಿದರು.
ನೌಕಾಪಡೆಯ ರಕ್ಷಣಾ ವ್ಯವಸ್ಥೆಗಳ ಪರಿಶೀಲನೆ
ಕಾರ್ಖಾನೆಯ ಭೇಟಿಯ ಸಂದರ್ಭದಲ್ಲಿ ಸಚಿವರು ಮಷಿನ್ ಮತ್ತು ಟೂಲ್ ವಿಭಾಗ, ಫೌಂಡ್ರಿ ಹಾಗೂ ವ್ಯೂಹಾತ್ಮಕ ಉತ್ಪಾದನಾ ವಿಭಾಗಗಳ ಕಾರ್ಯಾಚರಣೆ ಮತ್ತು ಮೂಲಸೌಕರ್ಯಗಳನ್ನು ಹತ್ತಿರದಿಂದ ಪರಿಶೀಲಿಸಿದರು. ಪ್ರಮುಖವಾಗಿ ಭಾರತೀಯ ನೌಕಾಪಡೆಗೆ (Indian Navy) ಬಳಸಲಾಗುವ ಸಿಎನ್‌ಸಿ (CNC) ವ್ಯವಸ್ಥೆಗಳು, ನಿಖರ ಯಂತ್ರೋಪಕರಣಗಳು, ವಿಶೇಷ ಎಂಜಿನಿಯರಿಂಗ್ ಉಪಕರಣಗಳು ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಿದ ಸೋನಾರ್ ಡೈರೆಕ್ಟಿಂಗ್ ಗೇರ್ ವ್ಯವಸ್ಥೆಗಳ ಉತ್ಪಾದನೆ, ಜೋಡಣೆ ಹಾಗೂ ಪರೀಕ್ಷಾ ಪ್ರಕ್ರಿಯೆಗಳನ್ನು ಅವರು ವೀಕ್ಷಿಸಿದರು.
ರಕ್ಷಣಾ ಮತ್ತು ರೈಲ್ವೆ ಕ್ಷೇತ್ರಕ್ಕೆ ಹೆಚ್‌ಎಂಟಿ ಕೊಡುಗೆ
ದೇಶದ ರಕ್ಷಣೆ, ರೈಲ್ವೆ, ಏರೋಸ್ಪೇಸ್, ಹೆವಿ ಎಂಜಿನಿಯರಿಂಗ್ ಮತ್ತು ಸುಧಾರಿತ ಉತ್ಪಾದನೆ ಸೇರಿದಂತೆ ವಿವಿಧ ಕಾರ್ಯತಂತ್ರದ ಕ್ಷೇತ್ರಗಳಿಗೆ ಹೆಚ್‌ಎಂಟಿ ನೀಡುತ್ತಿರುವ ಮಹತ್ವದ ಕೊಡುಗೆಗಳ ಬಗ್ಗೆ ಸಚಿವರು ಮಾಹಿತಿ ಪಡೆದರು. ನೌಕಾ ಮತ್ತು ರಕ್ಷಣಾ ಅಗತ್ಯಗಳಿಗಾಗಿ ಅಭಿವೃದ್ಧಿಪಡಿಸಲಾದ ಸ್ಥಳೀಯ ತಂತ್ರಜ್ಞಾನ ವ್ಯವಸ್ಥೆಗಳನ್ನು ಪರಿಶೀಲಿಸಿದ ಅವರು, ಹೆಚ್‌ಎಂಟಿಯಂತಹ ಸಂಸ್ಥೆಗಳು ಭಾರತದ ಸಾರ್ವಜನಿಕ ವಲಯದ ಎಂಜಿನಿಯರಿಂಗ್ ವ್ಯವಸ್ಥೆಯ ಬಲವನ್ನು ಪ್ರತಿಬಿಂಬಿಸುತ್ತವೆ ಎಂದರು. ಇಲ್ಲಿನ ಉದ್ಯೋಗಿಗಳ ತಾಂತ್ರಿಕ ಪರಿಣತಿ ಹಾಗೂ ಬದ್ಧತೆಯು ದೇಶದ ಸ್ವಾವಲಂಬನೆಗೆ ಗಮನಾರ್ಹ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

