ಬೆಂಗಳೂರು: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ನಿತಿನ್ ನಬೀನ್ ಅವರು ಇಂದು (ಮೇ 23) ರಾತ್ರಿ ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳಿಗೆ ಅವರು ಈ ಮಾಹಿತಿ ನೀಡಿದ್ದಾರೆ.
ಮೇ 24ರ ಭಾನುವಾರದ ಮಹತ್ವದ ವೇಳಾಪಟ್ಟಿ:
ಯಡಿಯೂರಪ್ಪ ನಿವಾಸದಲ್ಲಿ ಬ್ರೇಕ್‌ಫಾಸ್ಟ್: ಭಾನುವಾರ ಬೆಳಗ್ಗೆ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಲಿರುವ ನಿತಿನ್ ನಬೀನ್, ಮುಖಂಡರೊಂದಿಗೆ ಉಪಾಹಾರ ಸೇವಿಸಲಿದ್ದಾರೆ.
ಕಾಡುಮಲ್ಲೇಶ್ವರನ ದರ್ಶನ: ಉಪಾಹಾರದ ನಂತರ ಮಲ್ಲೇಶ್ವರಂನ ಪ್ರಸಿದ್ಧ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ.
ಜಗನ್ನಾಥ ಭವನದಲ್ಲಿ ಹೈವೋಲ್ಟೇಜ್ ಸಭೆ: ಬೆಳಗ್ಗೆ 10 ಗಂಟೆಗೆ ರಾಜ್ಯ ಬಿಜೆಪಿ ಪ್ರಧಾನ ಕಚೇರಿ ‘ಜಗನ್ನಾಥ ಭವನ’ಕ್ಕೆ ಆಗಮಿಸಲಿರುವ ಅವರು, ಸುಮಾರು 2 ಗಂಟೆಗಳ ಕಾಲ ರಾಜ್ಯದ ಎಲ್ಲಾ ಬಿಜೆಪಿ ಶಾಸಕರು ಮತ್ತು ಸಂಸದರೊಂದಿಗೆ ಪ್ರಸ್ತುತ ರಾಜಕೀಯ ಸ್ಥಿತಿಗತಿಗಳ ಕುರಿತು ಗಂಭೀರ ಸಮಾಲೋಚನೆ ನಡೆಸಲಿದ್ದಾರೆ.
ಕೋರ್ ಕಮಿಟಿ ಹಾಗೂ ಪ್ರಶಿಕ್ಷಣ ವರ್ಗ: ಇದಾದ ಬಳಿಕ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ಅವರು, ನಂತರ ಬೆಂಗಳೂರು ಉತ್ತರ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
“ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ನಮ್ಮ ರಾಜ್ಯದ ಕಾರ್ಯಕರ್ತರ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಅವರ ಉಪಸ್ಥಿತಿಯು ಸಂಘಟನಾತ್ಮಕವಾಗಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮತ್ತು ರಾಜಕೀಯ ಸ್ಫೂರ್ತಿಯನ್ನು ತುಂಬಲಿದೆ” ಎಂದು ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

