ಬೆಂಗಳೂರು: ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷಿ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳ (KPS) ನೂತನ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಜೂನ್ 1 ರಂದು ಅಧಿಕೃತ ಚಾಲನೆ ಸಿಗಲಿದೆ. ಶಿವಮೊಗ್ಗದಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಿಂದ ಇಂದು ಇಲಾಖೆಯ ಉನ್ನತ ಅಧಿಕಾರಿಗಳು, ಬಿಇಒ, ಪ್ರಾಂಶುಪಾಲರು ಹಾಗೂ ಎಸ್.ಡಿ.ಎಂ.ಸಿ ಪದಾಧಿಕಾರಿಗಳೊಂದಿಗೆ ನಡೆಸಿದ ವರ್ಚುವಲ್ ಸಭೆಯಲ್ಲಿ ಸಚಿವರು ಈ ಮಾಹಿತಿ ನೀಡಿದರು. ಸರ್ಕಾರವು ಒಟ್ಟು 1,000 ಸುಸಜ್ಜಿತ ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಗುರಿ ಹೊಂದಿದೆ ಎಂದರು.
ಜೂನ್ 1 ರಂದು ಶಾಲಾರಂಭ: ಹಬ್ಬದಂತೆ ಸ್ವಾಗತ
ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವನ್ನು ಕೇವಲ ಪ್ರವೇಶಾತಿಯ ದಿನವನ್ನಾಗಿ ನೋಡದೆ, ‘ಮಕ್ಕಳ ಹಬ್ಬ’ವಾಗಿ ಆಚರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕುರಿತು ಸಚಿವರು ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ:
3 ದಿನಗಳ ಸ್ವಚ್ಛತಾ ಅಭಿಯಾನ: ಮೇ 29 ರಿಂದ 31 ರವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಆವರಣವನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು.
ತಳಿರು ತೋರಣದ ಅಲಂಕಾರ: ಜೂನ್ 1 ರಂದು ಶಾಲೆಗೆ ಬರುವ ಪುಟ್ಟ ಕಂದಮ್ಮಗಳನ್ನು ತಳಿರು ತೋರಣ ಕಟ್ಟಿ, ಸಡಗರದಿಂದ ಬರಮಾಡಿಕೊಳ್ಳಬೇಕು.
ವಿಶೇಷ ದಾಸೋಹ: ಹಳೆಯ ವಿದ್ಯಾರ್ಥಿಗಳು ಹಾಗೂ ಎಸ್.ಡಿ.ಎಂ.ಸಿ ಸಹಯೋಗದೊಂದಿಗೆ ಮೊದಲ ದಿನ ವಿದ್ಯಾರ್ಥಿಗಳಿಗೆ ವಿಶೇಷ ಸಿಹಿ ಊಟದ ವ್ಯವಸ್ಥೆ ಮಾಡಬೇಕು.
ಸರ್ಕಾರಿ ಶಾಲೆಗಳ ಉದ್ಧಾರಕ್ಕೆ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಅಭಿಯಾನ:
ರಾಜ್ಯದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಕೇವಲ ಬಜೆಟ್ ಅನುದಾನದ ಮೇಲೆಯೇ ಅವಲಂಬಿತವಾಗದೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ. ಉದ್ಯಮಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆಯಡಿ ಮುಕ್ತವಾಗಿ ನೆರವು ನೀಡಬಹುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಇರುವ 46,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ 500 ರೂಪಾಯಿಗಳಿಂದ ಹಿಡಿದು ಕೋಟ್ಯಂತರ ರೂಪಾಯಿಗಳವರೆಗೆ ದೇಣಿಗೆ ಹರಿದು ಬರುತ್ತಿದೆ. ಸಾರ್ವಜನಿಕರಿಂದ ಬರುವ ಈ ಆರ್ಥಿಕ ಸಹಾಯವನ್ನು ಶಾಲೆಗಳಿಗೆ ಡಿಜಿಟಲ್ ಸ್ಮಾರ್ಟ್ ಟಿವಿ, ಶುದ್ಧ ಕುಡಿಯುವ ನೀರಿನ ಘಟಕ (RO ಪ್ಲಾಂಟ್), ಸುಸಜ್ಜಿತ ಶೌಚಾಲಯಗಳು, ಫ್ಯಾನ್ ಹಾಗೂ ವಿಜ್ಞಾನ ಪ್ರಯೋಗಾಲಯದ ಉಪಕರಣಗಳನ್ನು ಒದಗಿಸಲು ಬಳಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ದಾಖಲಾತಿ ಹೆಚ್ಚಳಕ್ಕೆ ಹೊಸ ಸೂತ್ರ:
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ (Admission) ಪ್ರಮಾಣವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಪೋಷಕರು ಜಂಟಿಯಾಗಿ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ:
ನುರಿತ ಬೋಧಕ ಸಿಬ್ಬಂದಿ: ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಅತ್ಯಂತ ಅರ್ಹ ಹಾಗೂ ಉನ್ನತ ತರಬೇತಿ ಪಡೆದ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ. ಈ ಸತ್ಯವನ್ನು ಪೋಷಕರಿಗೆ ತಲುಪಿಸಿ ದಾಖಲಾತಿ ಹೆಚ್ಚಿಸಬೇಕು.
ಪ್ರತಿದಿನ ಪೌಷ್ಟಿಕ ಆಹಾರ: ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಯೋಗದೊಂದಿಗೆ ವಾರದ ಎಲ್ಲಾ ದಿನಗಳಲ್ಲೂ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸಲಾಗುತ್ತಿದೆ.
ಉಚಿತ ವಿದ್ಯುತ್ ಭಾಗ್ಯ: ಶಾಲಾ ಅವಧಿಯ ನಂತರ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಕಂಪ್ಯೂಟರ್ ಶಿಕ್ಷಣ ನೀಡಲು ಅನುಕೂಲವಾಗುವಂತೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.

