Sat. Jun 6th, 2026

ಕರ್ನಾಟಕದ ‘ಕ್ವಿನ್ ಸಿಟಿ’ಗೆ ಟೊಯೋಟಾ ಎಂಟ್ರಿ: ₹1,200 ಕೋಟಿ ಹೂಡಿಕೆ, ಜಾಗತಿಕ ಹಬ್ ಸ್ಥಾಪನೆ

Share this with Friends

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಾಬಸಪೇಟೆ-ದೊಡ್ಡಬಳ್ಳಾಪುರ ನಡುವಿನ ‘ಕ್ವಿನ್ ಸಿಟಿ’ಗೆ (KHWIN City) ಬೃಹತ್ ಹೂಡಿಕೆಯೊಂದು ಹರಿದುಬಂದಿದೆ. ಜಾಗತಿಕ ವಾಹನ ತಯಾರಿಕಾ ದೈತ್ಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಸಂಸ್ಥೆಯು ಇಲ್ಲಿ ₹1,200 ಕೋಟಿ ಬಂಡವಾಳದೊಂದಿಗೆ ತನ್ನ ಅತ್ಯಾಧುನಿಕ ‘ಬಿಝ್ಇಂಟೆಲ್ ಹಬ್’ (BizIntel Hub) ಅನ್ನು ಸ್ಥಾಪಿಸಲು ಮುಂದೆ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಸಮ್ಮುಖದಲ್ಲಿ ಈ ಕುರಿತು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಹಾಗೂ ಟೊಯೋಟಾ ಕಂಪನಿಯ ಸಿಒಒ ಸುದೀಪ್ ದಳವಿ ಒಪ್ಪಂದಕ್ಕೆ ಅಂಕಿತ ಹಾಕಿದರು.

ಬಂಡವಾಳ ಹೂಡಿಕೆಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಬೆಂಬಲ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಲ್ಲದೆ, ಜಾಗತಿಕ ಮಟ್ಟದಲ್ಲೇ ಇಂತಹದ್ದೊಂದು ವಿಶಿಷ್ಟ ಹಬ್ ನಿರ್ಮಾಣವಾಗುತ್ತಿರುವುದು ಇದೇ ಮೊದಲು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

5 ವರ್ಷಗಳಲ್ಲಿ ಹೂಡಿಕೆ: ಯುವಕರಿಗೆ ಉದ್ಯೋಗಾವಕಾಶ

ಕ್ವಿನ್ ಸಿಟಿಯಲ್ಲಿ ಆರಂಭವಾಗುತ್ತಿರುವ ಮೊದಲ ದೊಡ್ಡ ಹೂಡಿಕೆ ಯೋಜನೆ ಇದಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಈ ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ:

300 ಎಕರೆ ಜಾಗ: ಹೊಸ ಹಬ್ ಸ್ಥಾಪನೆಗಾಗಿ ಟೊಯೋಟಾ ಕಂಪನಿಗೆ ಕ್ವಿನ್ ಸಿಟಿಯಲ್ಲಿ 300 ಎಕರೆ ಭೂಮಿಯನ್ನು ಮಂಜೂರು ಮಾಡಲಾಗುತ್ತಿದೆ.

ಕಾರ್ಯಚಟುವಟಿಕೆಗಳು: ಈ ಕೇಂದ್ರದಲ್ಲಿ ಅತ್ಯಾಧುನಿಕ ವಾಹನಗಳ ತಯಾರಿಕೆ, ಸಂಶೋಧನೆ, ವಿವಿಧ ಪರೀಕ್ಷೆಗಳು (Testing) ಮತ್ತು ಮಾಡರ್ನ್ ಅಸೆಂಬ್ಲಿಂಗ್ ಘಟಕಗಳು ತಲೆಯೆತ್ತಲಿವೆ.

ಉದ್ಯೋಗ ಸೃಷ್ಟಿ: ಮುಂದಿನ 5 ವರ್ಷಗಳಲ್ಲಿ ಹಂತಹಂತವಾಗಿ ಹೂಡಿಕೆ ನಡೆಯಲಿದ್ದು, ಆರಂಭಿಕವಾಗಿ 200 ಕ್ಕೂ ಹೆಚ್ಚು ತಾಂತ್ರಿಕ ಉದ್ಯೋಗಗಳು ಸೃಷ್ಟಿಯಾಗಲಿವೆ.

ಜಾಗತಿಕ ಶಿಕ್ಷಣ, ಆರೋಗ್ಯ ಸಂಸ್ಥೆಗಳಿಗೂ ಮಣೆ

ಒಟ್ಟು 5,800 ಎಕರೆ ವಿಸ್ತೀರ್ಣದಲ್ಲಿ ಹಂತಹಂತವಾಗಿ ನಿರ್ಮಾಣವಾಗಲಿರುವ ಈ ಹೈಟೆಕ್ ಸಿಟಿಯಲ್ಲಿ ನಾವೀನ್ಯತೆ, ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ (IT) ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ವಿಶ್ವದ ಪ್ರಮುಖ 7-8 ಪ್ರಸಿದ್ಧ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಹಾಗೂ ಹೆಲ್ತ್‌ಕೇರ್ ಸಂಸ್ಥೆಗಳು ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದು, ಶೀಘ್ರದಲ್ಲೇ ಒಪ್ಪಂದಗಳು ಅಂತಿಮವಾಗಲಿವೆ.

ಒಟ್ಟಾರೆಯಾಗಿ ಈ ಬೃಹತ್ ನಗರದ ಅಭಿವೃದ್ಧಿಯಿಂದ ರಾಜ್ಯಕ್ಕೆ ₹48,000 ಕೋಟಿ ಬಂಡವಾಳ ಹರಿದುಬರಲಿದ್ದು, ಭವಿಷ್ಯದಲ್ಲಿ ಸುಮಾರು 1 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

 


Share this with Friends

Related Post