Fri. Jun 5th, 2026

‘ಸಿಇಟಿ ಸೀಟು ಹಂಚಿಕೆ ಮಂಥನ’ಕ್ಕೆ ಭರ್ಜರಿ ಆರಂಭ: ಮೊದಲ ದಿನವೇ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಭಾಗಿ, ಮೇ 30ರವರೆಗೆ ಅವಕಾಶ!

Share this with Friends

ಬೆಂಗಳೂರು: ಸಿಇಟಿ ಕೌನ್ಸೆಲಿಂಗ್ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿರುವ ‘ಸಿಇಟಿ ಸೀಟು ಹಂಚಿಕೆ ಮಂಥನ’ ಕಾರ್ಯಾಗಾರಕ್ಕೆ ಮೊದಲ ದಿನವೇ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಈ ವಿನೂತನ ಉಪಕ್ರಮಕ್ಕೆ ಮೊದಲ ದಿನವೇ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಭಾಗವಹಿಸಿ, ತಮಗಿದ್ದ ಗೊಂದಲಗಳನ್ನು ನಿವಾರಿಸಿಕೊಂಡಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

64 ಕಾಲೇಜುಗಳಲ್ಲಿ ಹೈಟೆಕ್ ಕಾರ್ಯಾಗಾರ:

ರಾಜ್ಯದ ಆಯ್ದ 64 ಸರ್ಕಾರಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ವಿಶೇಷ ಮಂಥನ ಕಾರ್ಯಾಗಾರಗಳು ಯಶಸ್ವಿಯಾಗಿ ನಡೆದಿವೆ. ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಮೊದಲ ಅವಧಿ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಎರಡನೇ ಅವಧಿಯ ಕೌನ್ಸೆಲಿಂಗ್ ಮಾರ್ಗದರ್ಶನ ನಡೆಯುತ್ತಿದೆ. ಕೆಇಎ ವತಿಯಿಂದ ವಿಶೇಷ ತರಬೇತಿ ಪಡೆದ ನುರಿತ ಸಂಪನ್ಮೂಲ ವ್ಯಕ್ತಿಗಳು ಹಾಗೂ ತಜ್ಞ ಸಿಬ್ಬಂದಿ ಸ್ಥಳದಲ್ಲೇ ಹಾಜರಿದ್ದು, ಅಭ್ಯರ್ಥಿಗಳ ನಾನಾ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ವ್ಯವಸ್ಥಿತ ಆನ್‌ಲೈನ್ ಸ್ಲಾಟ್ ಬುಕಿಂಗ್:

ವಿದ್ಯಾರ್ಥಿಗಳು ತಮಗೆ ಹತ್ತಿರವಿರುವ ಕಾಲೇಜುಗಳಿಗೆ ಭೇಟಿ ನೀಡುವ ಮುನ್ನ ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಲಾಟ್ ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಮೊದಲ ದಿನದ ಕಾರ್ಯಕ್ರಮಕ್ಕಾಗಿ ಸುಮಾರು 13 ಸಾವಿರಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದರು. ಮೇ 28 ರಂದು ಹೊರತುಪಡಿಸಿ, ಮೇ 30ರ ವರೆಗೆ ಎಲ್ಲಾ ದಿನಗಳಲ್ಲೂ ಈ ಮಂಥನ ಕಾರ್ಯಾಗಾರ ಮುಂದುವರಿಯಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಮೆಚ್ಚುಗೆ:

ಕೌನ್ಸೆಲಿಂಗ್ ಪ್ರಕ್ರಿಯೆ, ಆಪ್ಷನ್ ಎಂಟ್ರಿ (Options Entry) ಹಾಗೂ ಛಾಯ್ಸ್ ಸೆಲೆಕ್ಷನ್ (Choice Selection) ನಂತಹ ಪ್ರಮುಖ ಹಂತಗಳಲ್ಲಾಗುವ ತಪ್ಪುಗಳನ್ನು ತಡೆಯಲು ಈ ಕಾರ್ಯಕ್ರಮ ಅತ್ಯಂತ ಸಹಕಾರಿಯಾಗಿದೆ ಎಂದು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಕೇವಲ ಒಂದು ದಿನ ಮಾತ್ರ ಇದ್ದಿದ್ದರಿಂದ ಗೊಂದಲ ಉಂಟಾಗಿತ್ತು, ಆದರೆ ಈ ಬಾರಿ ಐದು ದಿನಗಳ ಕಾಲ ಸ್ಲಾಟ್ ಆಧಾರಿತ ವ್ಯವಸ್ಥೆ ಮಾಡಿರುವುದು ಆತಂಕವಿಲ್ಲದೆ ಮಾಹಿತಿ ಪಡೆಯಲು ನೆರವಾಗಿದೆ ಎಂದು ಪೋಷಕರು ಕೆಇಎ ಕ್ರಮವನ್ನು ಶ್ಲಾಘಿಸಿದ್ದಾರೆ.

 


Share this with Friends

Related Post