Sat. Jun 6th, 2026

ಯಶವಂತಪುರ ರೈಲು ನಿಲ್ದಾಣದಲ್ಲಿ ಭಾರಿ ಬೇಟೆ: ₹66 ಲಕ್ಷ ಮೌಲ್ಯದ ಅಕ್ರಮ ವಿದೇಶಿ ಮದ್ಯ ವಶ, ಸಚಿವ ತಿಮ್ಮಾಪೂರ್ ಶ್ಲಾಘನೆ!

Share this with Friends

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ರೈಲಿನ ಮೂಲಕ ಸಾಗಿಸಲಾಗುತ್ತಿದ್ದ ಬರೋಬ್ಬರಿ ₹66 ಲಕ್ಷ ಮೌಲ್ಯದ ಅಕ್ರಮ ಹಾಗೂ ಶಂಕಿತ ನಕಲಿ ವಿದೇಶಿ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ. ಅಧಿಕಾರಿಗಳ ಈ ಯಶಸ್ವಿ ತನಿಖಾ ಕಾರ್ಯವನ್ನು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ್ ಅವರು ಮುಕ್ತಾಕಂಠದಿಂದ ಶ್ಲಾಘಿಸಿದ್ದಾರೆ.

ರೈಲ್ವೆ ಪಾರ್ಸಲ್ ಗೋಡೌನ್ ಮೇಲೆ ದಾಳಿ:

ಮೇ 22 ರಂದು ರಾಷ್ಟ್ರ ರಾಜಧಾನಿ ದೆಹಲಿಯಿಂದ ಸಿಲಿಕಾನ್ ಸಿಟಿಗೆ ಆಗಮಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಭಾರಿ ಪ್ರಮಾಣದ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಇಲಾಖೆಗೆ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಭರತೇಶ್ ನೇತೃತ್ವದ ತಂಡ, ರೈಲ್ವೆ ಭದ್ರತಾ ಸಿಬ್ಬಂದಿಯೊಂದಿಗೆ (RPF) ಜಂಟಿ ಕಾರ್ಯಾಚರಣೆ ನಡೆಸಿತು. ಯಶವಂತಪುರ ರೈಲ್ವೆ ನಿಲ್ದಾಣದ ಅವರಣದಲ್ಲಿರುವ ಎ.ವಿ.ಜಿ ಲಾಜಿಸ್ಟಿಕ್ಸ್ ಲಿಮಿಟೆಡ್ ಪಾರ್ಸಲ್ ಗೋದಾಮಿನ ಮುಂಭಾಗದಲ್ಲಿ ದಾಳಿ ನಡೆಸಿದಾಗ ಅಕ್ರಮ ಜಾಲ ಪತ್ತೆಯಾಗಿದೆ.

ದಾಳಿಯ ವೇಳೆ ಅಧಿಕಾರಿಗಳು ಒಟ್ಟು 74 ರಟ್ಟಿನ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಲಾಗಿದ್ದ ವಿವಿಧ ಪ್ರಮುಖ ಪ್ರೀಮಿಯಂ ಬ್ರ್ಯಾಂಡ್‌ಗಳ ಸಿಂಗಲ್ ಮಾಲ್ಟ್ ವಿಸ್ಕಿ ಹಾಗೂ ವೋಡ್ಕಾ ಸೇರಿದಂತೆ ಒಟ್ಟು 1,118 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಸರಿಸುಮಾರು 1,042 ಲೀಟರ್‌ನಷ್ಟಿರುವ ಈ ಶಂಕಿತ ನಕಲಿ ವಿದೇಶಿ ಮದ್ಯದ ಒಟ್ಟು ಅಂದಾಜು ಮೌಲ್ಯ ₹66,00,000 ಎಂದು ಇಲಾಖೆ ತಿಳಿಸಿದೆ. ಈ ದಂಧೆಗೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೊರ ರಾಜ್ಯ ಹಾಗೂ ವಿದೇಶಗಳಿಂದ ಅಕ್ರಮವಾಗಿ ರಾಜ್ಯಕ್ಕೆ ಮದ್ಯ ಸಾಗಿಸುವ ಜಾಲಗಳ ವಿರುದ್ಧ ಹದ್ದಿನ ಕಣ್ಣಿಡಲು ಸಚಿವ ಆರ್.ಬಿ. ತಿಮ್ಮಾಪೂರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸಚಿವರ ನಿರ್ದೇಶನದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿ ಯಶಸ್ವಿಯಾದ ಇಡೀ ತಂಡಕ್ಕೆ ಸಚಿವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

 


Share this with Friends

Related Post