ಬೆಂಗಳೂರು: ಮೇ 31 ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದ ಪ್ರಯುಕ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸ್ಪಷ್ಟಪಡಿಸಿದೆ. ಈ ಕುರಿತು ನಿಗಮವು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಸುಳ್ಳು ಜಾಹೀರಾತುಗಳ ನಂಬಬೇಡಿ
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಆರ್‌ಸಿಬಿ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣದ ಆಮಿಷ ಒಡ್ಡಿ ತಪ್ಪು ಮಾಹಿತಿ ಪ್ರಸಾರ ಮಾಡುತ್ತಿರುವುದು ಬಿಎಂಆರ್‌ಸಿಎಲ್ ಗಮನಕ್ಕೆ ಬಂದಿದೆ. ಈ ರೀತಿಯ ಯಾವುದೇ ಉಚಿತ ಯೋಜನೆಗಳನ್ನು ನಿಗಮವು ಘೋಷಿಸಿಲ್ಲ ಹಾಗೂ ಇಂತಹ ಪ್ರಚಾರ ನಡೆಸಲು ಯಾವುದೇ ಸಂಸ್ಥೆಗೆ ಅನುಮತಿ ನೀಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಂದಿನಂತೆ ಟಿಕೆಟ್ ಕಡ್ಡಾಯ
ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೂ ನಿಯಮಗಳು ಅನ್ವಯಿಸುತ್ತವೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಟಿಕೆಟ್, ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್ ಅಥವಾ ಎನ್‌ಸಿಎಂಸಿ ಕಾರ್ಡ್ ಬಳಸಿ, ನಿಗದಿಪಡಿಸಿದ ದರವನ್ನು ಪಾವತಿಸಿ ಪ್ರಯಾಣಿಸಬೇಕಾಗುತ್ತದೆ.
ಸಾರ್ವಜನಿಕರಲ್ಲಿ ಮನವಿ
ಅನಧಿಕೃತ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು ಮತ್ತು ಜಾಹೀರಾತುಗಳನ್ನು ನಂಬಿ ಸಾರ್ವಜನಿಕರು ವಂಚನೆಗೆ ಒಳಗಾಗಬಾರದು. ಮೆಟ್ರೋ ಸೇವೆ ಹಾಗೂ ದರಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಬಿಎಂಆರ್‌ಸಿಎಲ್‌ನ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅವಲಂಬಿಸಬೇಕು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ವಿನಂತಿಸಿದ್ದಾರೆ. ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದ್ದಾರೆ.

