ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಅತ್ಯಂತ ಗಂಭೀರ ಹಾಗೂ ಆಶಯದ ನುಡಿಗಳ ಮೂಲಕ ಶುಭ ಹಾರೈಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಒಮ್ಮತದಿಂದ ಆಯ್ಕೆಯಾದ ಬೆನ್ನಲ್ಲೇ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಸಿದ್ದರಾಮಯ್ಯ, ತಮ್ಮ ಎಂಟು ವರ್ಷಗಳ ಮುಖ್ಯಮಂತ್ರಿ ಅವಧಿಯ ಸಾಧನೆಗಳನ್ನು ನೆನಪಿಸಿಕೊಳ್ಳುತ್ತಲೇ, ಮುಂದಿನ ಆಡಳಿತದ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್ ಅವರ ಹೆಗಲಿಗೇರಿಸಿದ್ದಾರೆ.
‘ನಿಮ್ಮ ನಿಷ್ಠೆಯನ್ನು ಹತ್ತಿರದಿಂದ ಗಮನಿಸಿದ್ದೇನೆ’
ಡಿ.ಕೆ. ಶಿವಕುಮಾರ್ ಅವರನ್ನು “ಸಂಗಾತಿ” ಎಂದು ಸಂಬೋಧಿಸಿರುವ ಸಿದ್ದರಾಮಯ್ಯ, “ಪ್ರಿಯ ಶಿವಕುಮಾರ್, ನಿಮ್ಮಲ್ಲಿರುವ ಅದಮ್ಯವಾದ ಕ್ರಿಯಾಶೀಲತೆ, ಸಂಘಟನಾ ಚಾತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಸಂಶಯಾತೀತ ನಿಷ್ಠೆಯನ್ನು ಒಬ್ಬ ಸಹದ್ಯೋಗಿಯಾಗಿ ನಾನು ಸಮೀಪದಿಂದ ಗಮನಿಸಿದ್ದೇನೆ. ಇವೆಲ್ಲದರ ಸದುಪಯೋಗ ರಾಜ್ಯದ ಜನತೆಗೆ ಆಗಲಿ” ಎಂದು ಹೃತ್ಪೂರ್ವಕವಾಗಿ ಹಾರೈಸಿದ್ದಾರೆ.
ದೇಶಕ್ಕೆ ಮಾದರಿ ಕರ್ನಾಟಕ: ಸಿದ್ದರಾಮಯ್ಯ ಹೆಮ್ಮೆ
ತಮ್ಮ ಆಡಳಿತ ಅವಧಿಯಲ್ಲಿ ಕರ್ನಾಟಕ ಸಾಧಿಸಿದ ಆರ್ಥಿಕ ಮೈಲಿಗಲ್ಲುಗಳನ್ನು ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ ಬಿಚ್ಚಿಟ್ಟಿದ್ದಾರೆ. “ಇಂದು ಕರ್ನಾಟಕ ತಲಾವಾರು ಆದಾಯದಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ. ಕೇವಲ ಆದಾಯ ಮಾತ್ರವಲ್ಲದೆ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲಿಯೂ ರಾಜ್ಯ ಮಾದರಿಯಾಗಿದೆ. ನಾವು ಪ್ರಾರಂಭಿಸಿರುವ ಪ್ರತಿಯೊಂದು ಯೋಜನೆಯನ್ನು ದೇಶದ ಉಳಿದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ತರುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಅವರು ಹೆೇಳಿದ್ದಾರೆ.
8 ವರ್ಷಗಳ ಸೇವೆ ಮತ್ತು ಮುಂದಿನ ಸವಾಲು
ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆ ಮಾಡಲು ಸಿಕ್ಕ ಅವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ಧಿ ಪಡಿಸಿದ ಹೆಮ್ಮೆ ನನ್ನದಾಗಿದೆ ಎಂದಿರುವ ಅವರು, “ಈ ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯುವ ಜವಾಬ್ದಾರಿ ಈಗ ನಿಮ್ಮ ಹೆಗಲ ಮೇಲಿದೆ. ಅದಕ್ಕೆ ಬೇಕಾಗಿರುವ ಬದ್ಧತೆ, ಸಾಮರ್ಥ್ಯ ಮತ್ತು ಮುನ್ನೋಟ ನಿಮ್ಮಲ್ಲಿದೆ ಎನ್ನುವ ನಂಬಿಕೆ ನನಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ದೇಶ ಎದುರಿಸುತ್ತಿರುವ ಆರ್ಥಿಕ ಆತಂಕಗಳ ನಡುವೆ ಜನರ ಭವಿಷ್ಯದ ಸುರಕ್ಷತೆಗೆ ಒತ್ತು ನೀಡುವಂತೆ ಅವರು ಸಲಹೆ ನೀಡಿದ್ದಾರೆ. “ಇಡೀ ದೇಶ ಇಂದು ಆರ್ಥಿಕ ಅಭದ್ರತೆಯಲ್ಲಿ ಭೀತಿಗೊಳಗಾಗಿರುವ ಸ್ಥಿತಿಯಲ್ಲಿ ರಾಜ್ಯದ ಜನತೆ ಕೂಡ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಸಮರ್ಥ ಆಡಳಿತದ ಮೂಲಕ ಅವರಲ್ಲಿ ಭರವಸೆಯನ್ನು ಹುಟ್ಟಿಸುವ ಜೊತೆಯಲ್ಲಿ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
‘ಚುನಾವಣೆಯಲ್ಲಿ ಸೋತರೂ ಸೈದ್ಧಾಂತಿಕವಾಗಿ ಸೋಲಬಾರದು’:
ರಾಷ್ಟ್ರಮಟ್ಟದಲ್ಲಿ ಪಕ್ಷ ಎದುರಿಸುತ್ತಿರುವ ಸವಾಲುಗಳ ಕುರಿತು ಮುಕ್ತವಾಗಿ ಮಾತನಾಡಿರುವ ಸಿದ್ದರಾಮಯ್ಯ, “ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಸ್ವಲ್ಪ ಹಿನ್ನಡೆಯಾಗಿದೆ. ನಾವು ಚುನಾವಣೆಯಲ್ಲಿ ಸೋಲಬಹುದು ಅಥವಾ ಗೆಲ್ಲಬಹುದು. ಆದರೆ ಸೈದ್ಧಾಂತಿಕವಾಗಿ ಎಂದೂ ಸೋಲಬಾರದು. ಒಂದು ರಾಜಕೀಯ ಪಕ್ಷ ಸೈದ್ಧಾಂತಿಕವಾಗಿ ಸೋತರೆ, ಆ ಪಕ್ಷ ಮುಂದಿನ ದಿನಗಳಲ್ಲಿ ಚುನಾವಣೆಯನ್ನು ಗೆಲ್ಲಲಾಗದೆ ನಾಶವಾಗುತ್ತದೆ ಎಂದು ನಂಬಿದವನು ನಾನು” ಎಂದು ರಾಜಕೀಯ ಪಕ್ಷಗಳ ಅಸ್ತಿತ್ವದ ಬಗ್ಗೆ ಮಾರ್ಮಿಕವಾಗಿ ಬರೆದಿದ್ದಾರೆ.
ಕಾಂಗ್ರೆಸ್ ಗತವೈಭವ ಮರುಸ್ಥಾಪನೆ ಜವಾಬ್ದಾರಿ
ರಾಜ್ಯದ ಆಡಳಿತದ ಜೊತೆಗೆ ಪಕ್ಷದ ಬಲವರ್ಧನೆಗೆ ಒತ್ತು ನೀಡುವಂತೆ ಕೋರಿರುವ ಅವರು, “ರಾಜ್ಯದ ಅಭಿವೃದ್ಧಿಯ ಜೊತೆಯಲ್ಲಿ ನಮ್ಮೆಲ್ಲರ ಮಾತೃಸ್ವರೂಪಿಯಾಗಿರುವ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ಸ್ಥಾಪಿಸುವ ಹೊಣೆಗಾರಿಕೆ ಕೂಡ ನಮ್ಮೆಲ್ಲರ ಮೇಲಿದೆ. ಕಾಂಗ್ರೆಸ್ ಪಕ್ಷ ಇಂತಹ ಸವಾಲಿನ ಅನೇಕ ಅಗ್ನಿದಿವ್ಯಗಳನ್ನು ಯಶಸ್ವಿಯಾಗಿ ದಾಟಿ ಬಂದಿರುವ ಇತಿಹಾಸ ನಮಗೆಲ್ಲರಿಗೂ ಪ್ರೇರಣೆಯಾಗಲಿ. ನಿಮ್ಮ ನಾಯಕತ್ವದ ಬಲ ಈ ಪ್ರಯತ್ನವನ್ನು ಸಫಲಗೊಳಿಸಲಿ” ಎಂದು ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಶಕ್ತಿಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದ ಸದ್ಯದ ಪರಿಸ್ಥಿತಿಗೆ ಕಳವಳ
ಪ್ರಸ್ತುತ ದೇಶದ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, “ಕಾಂಗ್ರೆಸ್ ಪಕ್ಷದ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಸೌಹಾರ್ದ ಭಾರತವನ್ನು ಜಾತಿ-ಧರ್ಮಗಳ ಹೆಸರಲ್ಲಿ ಒಡೆದು ಹಾಕಲಾಗುತ್ತಿದೆ. ಸಂವಿಧಾನವನ್ನೇ ಪ್ರಶ್ನಿಸಲಾಗುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವವರ ದಮನ ಮಾಡಲಾಗುತ್ತಿದೆ. ಗಾಂಧಿಯವರನ್ನು ಕೊಂದವರು ಇಂದು ಗೋಡ್ಸೆಯನ್ನು ಮೆರೆಸಲು ಹೊರಟಿದ್ದಾರೆ” ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಎರಡನೇ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟ!
ಸಂವಿಧಾನದ ಮೌಲ್ಯಗಳ ರಕ್ಷಣೆಗೆ ಕನ್ನಡಿಗರು ಜೊತೆಯಾಗಲಿದ್ದಾರೆ ಎಂದು ಭರವಸೆ ನೀಡಿರುವ ಅವರು, “ಸಂವಿಧಾನದ ಆಶಯಗಳಾದ ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನೇ ತನ್ನ ಸಿದ್ಧಾಂತವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸಲು ಮುಂದಾಗುವುದೇ ದೇಶವನ್ನು ಉಳಿಸಲು ನಮಗೆ ಇರುವ ಏಕೈಕ ಮತ್ತು ಸರಿಯಾದ ದಾರಿಯಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಮತ್ತು ಸಂವಿಧಾನದ ಗೌರವವನ್ನು ಕಾಪಾಡಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ, ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ. ನಿಮಗೆ ಸದಾ ಯಶಸ್ಸು ಸಿಗಲಿ” ಎಂದು ಹಾರೈಸಿದ್ದಾರೆ.
ಸಿದ್ದರಾಮಯ್ಯ ಅವರ ಈ ಸೈದ್ಧಾಂತಿಕ ನಿಲುವು ಮತ್ತು ನೂತನ ಮುಖ್ಯಮಂತ್ರಿಗೆ ನೀಡಿರುವ ಈ ಕಿವಿಮಾತು ಪ್ರಸ್ತುತ ರಾಜಕೀಯ ವಲಯದಲ್ಲಿ ಅತ್ಯಂತ ಗಂಭೀರ ಚರ್ಚೆಗೆ ಗ್ರಾಸವಾಗಿದೆ

