Fri. Jun 5th, 2026

ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಮಂಡಿಸಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ಆರ್. ಅಶೋಕ್ ಆಗ್ರಹ

Share this with Friends

ಬೆಂಗಳೂರು: ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಸರ್ಕಾರದ ಹಣಕಾಸು ಸ್ಥಿತಿಗತಿಯ ನೈಜ ಚಿತ್ರಣವನ್ನು ಜನರ ಮುಂದಿಡಲು ತಕ್ಷಣವೇ ಶ್ವೇತಪತ್ರ ಮಂಡಿಸಬೇಕು ಎಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ತಮ್ಮ ರಾಜ್ಯದ ಆರ್ಥಿಕ ಸ್ಥಿತಿಯನ್ನು ಬಹಿರಂಗಪಡಿಸಲು ಶ್ವೇತಪತ್ರ ಹೊರಡಿಸಿರುವುದನ್ನು ಸ್ವಾಗತಿಸಿರುವ ಆರ್. ಅಶೋಕ್, ಅದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.

ಖಜಾನೆಯ ಸತ್ಯ ಹೊರಬರಲಿ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ರಾಜ್ಯದ ಹಣಕಾಸು ವ್ಯವಸ್ಥೆಗೆ ಆಗಿರುವ ಪರಿಣಾಮಗಳನ್ನು ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ಕರ್ನಾಟಕದ ಜನತೆಗಿದೆ ಎಂದು ಅಶೋಕ್ ಪ್ರತಿಪಾದಿಸಿದ್ದಾರೆ. ಅವೈಜ್ಞಾನಿಕ ಯೋಜನೆಗಳು, ಮತಬ್ಯಾಂಕ್‌ ಕೇಂದ್ರಿತ ರಾಜಕಾರಣ ಹಾಗೂ ದುಂದುವೆಚ್ಚಗಳಿಂದಾಗಿ ರಾಜ್ಯದ ಆರ್ಥಿಕತೆಗೆ ಎಷ್ಟು ಹಾನಿಯಾಗಿದೆ ಮತ್ತು ಮುಂಬರುವ ಪೀಳಿಗೆಯ ಮೇಲೆ ಎಷ್ಟು ಸಾಲದ ಹೊರೆ ಬಿದ್ದಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದ್ದಾರೆ.

ಪಾರದರ್ಶಕತೆಗೆ ಆಗ್ರಹ:

ರಾಜ್ಯದ ಒಟ್ಟು ಸಾಲದ ಪ್ರಮಾಣ ಎಷ್ಟು? ಸರ್ಕಾರದ ಖಜಾನೆಯಲ್ಲಿ ಪ್ರಸ್ತುತ ಇರುವ ನೈಜ ಹಣ ಎಷ್ಟು? ಎಂಬ ಪ್ರಮುಖ ಪ್ರಶ್ನೆಗಳನ್ನು ಎತ್ತಿರುವ ಅವರು, ಸರ್ಕಾರಕ್ಕೆ ಮುಚ್ಚಿಡಲು ಏನೂ ಇಲ್ಲದಿದ್ದರೆ ತಕ್ಷಣವೇ ವಿಧಾನಸಭೆಯಲ್ಲಿ ಅಧಿಕೃತ ಆರ್ಥಿಕ ಶ್ವೇತಪತ್ರ ಮಂಡಿಸಲಿ ಎಂದು ಸವಾಲು ಹಾಕಿದ್ದಾರೆ. ಕನ್ನಡಿಗರಿಗೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಅಗತ್ಯವಿದ್ದು, ಹಿಂದಿನ ಸರ್ಕಾರದ ನಿಜವಾದ ಆರ್ಥಿಕ ಪರಿಸ್ಥಿತಿಯ ‘ಸಾಕ್ಷಿಗುಡ್ಡೆ’ ಸಾರ್ವಜನಿಕರಿಗೆ ತಿಳಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯನವರ ರಿಮೋಟ್‌ ಕಂಟ್ರೋಲ್‌ನಿಂದ ನಡೆಯುವ ಸರ್ಕಾರ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ರಚನೆಯಾದ ಹೊಸ ಸರ್ಕಾರ, ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯನವರ ರಿಮೋಟ್‌ ಕಂಟ್ರೋಲ್‌ನಿಂದ ನಡೆಯಲಿದೆ. ಇದರಿಂದ ಜನರಿಗೆ ಏನೂ ಹೊಸತು ಸಿಕ್ಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿರುವುದು ಹಳೆ ಸಿನಿಮಾದ ಪೋಸ್ಟರ್‌ ಬದಲಾದಂತಿದೆ. ಮುಖ್ಯಮಂತ್ರಿ ನಿವಾಸದ ಮುಂಭಾಗದ ಫಲಕದಲ್ಲಿ ಹೆಸರು ಬದಲಾಗಿದೆಯೇ ಹೊರತು ಜನರ ಕಷ್ಟಗಳು ನೀಗಿಲ್ಲ. ರಾಜ್ಯಕ್ಕೆ ಹೊಸ ಸಚಿವರು ಸಿಗುತ್ತಾರೆ ಎಂಬ ನಿರೀಕ್ಷೆ ಇದ್ದರೂ, ಹೊಸ ಮುಖಗಳು ಕಂಡಿಲ್ಲ. ಸಿದ್ದರಾಮಯ್ಯನವರ ಮಗ ಯತೀಂದ್ರ ಸಚಿವರಾಗಿ ಬಂದಿದ್ದಾರೆಯೇ ಹೊರತು ಹೊಸದೇನೂ ಇಲ್ಲ ಎಂದರು.


Share this with Friends

Related Post