Wed. Jun 10th, 2026

ಮೋದಿ ನಾಯಕತ್ವದಲ್ಲಿ ದೇಶಕ್ಕೆ ಜಾಗತಿಕ ಮನ್ನಣೆ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಶ್ಲಾಘನೆ

Share this with Friends

ನವದೆಹಲಿ: ಸುದೀರ್ಘ ಅವಧಿಗೆ ಯಶಸ್ವಿ ಆಡಳಿತ ನಡೆಸಿ ಮುನ್ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವವನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ನವದೆಹಲಿಯಲ್ಲಿ ಬುಧವಾರ ನಡೆದ  ಎನ್.ಡಿ.ಎ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಕೇಂದ್ರ ಸಚಿವರು ಪ್ರಧಾನಿಗಳನ್ನು ಗೌರವಿಸಿದರು.ಬಳಿಕ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಸಚಿವರು, ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರ ನೇತೃತ್ವದಲ್ಲಿ ಭಾರತವು ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗಿದೆ. ದೇಶದ ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಕ್ರಾಂತಿ, ಉತ್ಪಾದನಾ ವಲಯದ ಚೇತರಿಕೆ, ಆರ್ಥಿಕ ಒಳಗೊಳ್ಳುವಿಕೆ ಹಾಗೂ ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ಎತ್ತರಕ್ಕೆ ಜಿಗಿದಿದೆ ಎಂದು ತಿಳಿಸಿದ್ದಾರೆ.

ಬಲಿಷ್ಠ ಆರ್ಥಿಕತೆ – ಪಾರದರ್ಶಕ ಆಡಳಿತ:

ಕಳೆದ ದಶಕದಲ್ಲಿ ಹಮ್ಮಿಕೊಂಡ ಜನಪರ ಯೋಜನೆಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡುವಲ್ಲಿ ಪಾರದರ್ಶಕ ಸುಧಾರಣೆಗಳು ಪ್ರಮುಖ ಪಾತ್ರ ವಹಿಸಿವೆ. ಇದು ನಾಗರಿಕರಿಗೆ ಹೊಸ ಉದ್ಯೋಗ ಹಾಗೂ ಪ್ರಗತಿಯ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ‘ವಿಕಸಿತ ಭಾರತ 2047’ರ ನವಭಾರತದ ಕನಸನ್ನು ಸಾಕಾರಗೊಳಿಸಲು ಪ್ರಧಾನಿಯವರ ಮಾರ್ಗದರ್ಶನದಲ್ಲಿ ತಮ್ಮ ಸಚಿವಾಲಯವು ಸಂಪೂರ್ಣವಾಗಿ ಬದ್ಧವಾಗಿದೆ. ಮುಂಬರುವ ದಿನಗಳಲ್ಲಿ ಭಾರತವು ಜಾಗತಿಕ ನಾಯಕತ್ವದಲ್ಲಿ ಮತ್ತಷ್ಟು ಮೈಲಿಗಲ್ಲುಗಳನ್ನು ಸ್ಥಾಪಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share this with Friends

Related Post