ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡಗಳ ನಿರ್ಮಾಣ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ 1200 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಕಟ್ಟಡಗಳಿಗೆ ಇನ್ಮುಂದೆ ‘ಸ್ವಾಧೀನ ಪ್ರಮಾಣಪತ್ರ’ (Occupancy Certificate – OC) ಪಡೆಯುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಈ ನೂತನ ಆದೇಶವು 2025ರ ಡಿಸೆಂಬರ್ 31 ಮತ್ತು 2026ರ ಮಾರ್ಚ್ 23ರಂದು ಈ ಹಿಂದೆ ಹೊರಡಿಸಲಾಗಿದ್ದ ನಿಯಮಾವಳಿಗಳನ್ನು ಪರಿಷ್ಕರಿಸುತ್ತದೆ. ಸರ್ಕಾರದ ಈ ನಿರ್ಧಾರದಿಂದಾಗಿ ಗ್ರಾಮೀಣ ಭಾಗದ ಸಾರ್ವಜನಿಕರು ಇಲಾಖೆಗಳ ಸುತ್ತ ಅನಗತ್ಯವಾಗಿ ಅಲೆಯುವುದು ತಪ್ಪಲಿದ್ದು, ಆಡಳಿತಾತ್ಮಕ ತೊಂದರೆಗಳು ಗಣನೀಯವಾಗಿ ಕಮ್ಮಿಯಾಗಲಿವೆ.
ಗ್ರಾಮ ಪಂಚಾಯತಿ ಹಂತದಲ್ಲಿ ನಿರ್ಮಾಣವಾಗುವ ಸಣ್ಣ ವಸತಿ ಮನೆಗಳು, ಕಿರಾಣಿ ಹಾಗೂ ಇತರೆ ವ್ಯಾಪಾರೀ ಅಂಗಡಿಗಳು, ಶಾಲಾ ಕಟ್ಟಡಗಳು ಸೇರಿದಂತೆ 1200 ಚದರ ಅಡಿಗಿಂತ ಕಡಿಮೆ ಇರುವ ಎಲ್ಲಾ ರೀತಿಯ ನಿರ್ಮಾಣಗಳಿಗೂ ಈ ನಿಯಮ ಅನ್ವಯಿಸಲಿದೆ. ಗ್ರಾಮೀಣ ಭಾಗದಲ್ಲಿ ಸುಲಭವಾಗಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲು ಉತ್ತೇಜನ ನೀಡುವುದು ಮತ್ತು ಜನಸಾಮಾನ್ಯರಿಗೆ ತಳಮಟ್ಟದ ಆಡಳಿತ ಪ್ರಕ್ರಿಯೆಯನ್ನು ಸುಗಮಗೊಳಿಸುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗೂ ಪಂಚಾಯತ್ ರಾಜ್ ನಿರ್ದೇಶಕರಾದ ಕೃಷ್ಣಮೂರ್ತಿ ಕೆ.ಹೆಚ್. ಅವರು ಈ ಆದೇಶಕ್ಕೆ ಸಹಿ ಹಾಕಿದ್ದಾರೆ. ಈಗಾಗಲೇ ಈ ಪರಿಷ್ಕೃತ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲಾ ಪಂಚಾಯತ್ ರಾಜ್ ಆಯುಕ್ತರು, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಸೂಕ್ತ ಕ್ರಮಕ್ಕಾಗಿ ರವಾನಿಸಲಾಗಿದೆ.

