ಬೆಂಗಳೂರು: ರಾಜಧಾನಿಯಲ್ಲಿ ಡೆಂಗ್ಯೂ ಜ್ವರ ಹರಡುವುದನ್ನು ತಡೆಗಟ್ಟಲು ಮತ್ತು ತಮ್ಮ ಕುಟುಂಬಗಳ ಆರೋಗ್ಯವನ್ನು ರಕ್ಷಿಸಲು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಕೋರಿದೆ. ಸ್ವಚ್ಛ ಹಾಗೂ ನಿಂತ ನೀರನಲ್ಲಿ ಸಂತಾನೋತ್ಪತ್ತಿ ಮಾಡುವ ‘ಈಡೀಸ್’ ಈಜಿಪ್ಟಿ ಸೊಳ್ಳೆಗಳಿಂದ ಡೆಂಗ್ಯೂ ಹರಡುತ್ತಿದ್ದು, ಇಂತಹ ಸೊಳ್ಳೆಗಳ ಉತ್ಪತ್ತಿ ಮೂಲಗಳನ್ನು ನಾಶಪಡಿಸುವುದೇ ರೋಗ ನಿಯಂತ್ರಣಕ್ಕೆ ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಸಾರ್ವಜನಿಕರು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಯಲು ದಿನನಿತ್ಯ ಬಳಸುವ ನೀರಿನ ಕಂಟೈನರ್‌ಗಳು, ಏರ್ ಕೂಲರ್‌ಗಳು, ಹೂವಿನ ಕುಂಡಗಳು ಹಾಗೂ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿಯಮಿತವಾಗಿ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಯಾವುದೇ ಕಾರಣಕ್ಕೂ ಮನೆಗಳ ಒಳಗೆ ಮತ್ತು ಹೊರಗೆ ನೀರು ನಿಲ್ಲದಂತೆ ಜಾಗ್ರತೆ ವಹಿಸುವುದು ಅತ್ಯಗತ್ಯವಾಗಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ವೈಯಕ್ತಿಕ ರಕ್ಷಣಾ ಕ್ರಮಗಳಾಗಿ ಸಾರ್ವಜನಿಕರು ದೇಹವನ್ನು ಪೂರ್ಣವಾಗಿ ಮುಚ್ಚುವಂತಹ ಉದ್ದ ತೋಳಿನ ಉಡುಪುಗಳನ್ನು ಧರಿಸಬೇಕು ಹಾಗೂ ಸೊಳ್ಳೆ ನಿವಾರಕಗಳನ್ನು (Mosquito Repellents) ಬಳಸಬೇಕು. ಸೊಳ್ಳೆಗಳು ಮನೆಗಳ ಒಳಗೆ ಬರದಂತೆ ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಸೊಳ್ಳೆ ಪರದೆಗಳನ್ನು (Mosquito Screen) ಅಳವಡಿಸಿಕೊಳ್ಳುವುದು ಸೂಕ್ತ. ಒಂದು ವೇಳೆ ತೀವ್ರ ಜ್ವರ, ತಲೆನೋವು, ಮೈಕೈ ನೋವು ಅಥವಾ ಡೆಂಗ್ಯೂನ ಇತರೆ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ವೈದ್ಯೋಪಚಾರ ಮಾಡದೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು ಎಂದು ಪ್ರಾಧಿಕಾರ ಸಾರ್ವಜನಿಕರಲ್ಲಿ ವಿನಂತಿಸಿದೆ.
ಇಂದಿನ ನಮ್ಮ ಸುತ್ತಮುತ್ತಲಿನ ಸ್ವಚ್ಛ ಪರಿಸರವೇ ನಾಳಿನ ಡೆಂಗ್ಯೂ ಮುಕ್ತ ಸಮಾಜಕ್ಕೆ ಕಾರಣವಾಗಲಿದ್ದು, ಆರೋಗ್ಯವಂತ ಬೆಂಗಳೂರು ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕೆಂದು ಬೃಹತ್ ಬೆಂಗಳೂರು ಪ್ರಾಧಿಕಾರ ಕರೆ ನೀಡಿದೆ.

